ಸಾರಾಂಶ
ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ವೃತ್ತಿ ಮೇಳ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮ್ ಸಂಸ್ಥೆ , ಶಾಲಾ ಶಿಕ್ಷಣ ಇಲಾಖೆಯ ಹಾಗೂ ವೃತ್ ಇಂಡಸ್ಟ್ರೀಸ್ ಸಹಯೋಗದಲ್ಲಿ ಏಮ್ ಯೋಜನೆಯಲ್ಲಿ ಮಕ್ಕಳ ವೃತ್ತಿ ಮೇಳವನ್ನು (ಕೆರಿಯರ್ ಫೇರ್) ಶನಿವಾರ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮ ಉದ್ಘಾಟಿಸಿದ ವೃತ್ ಇಂಡಸ್ಟ್ರೀಸ್ ಮಾನವ ಸಂಪನ್ಮೂಲ ವಿಭಾಗದ ನಿವೃತ್ತ ಮುಖ್ಯಸ್ಥ ಗೋಪಾಲಕೃಷ್ಣ ಶಾಸ್ತ್ರಿ ಮಾತನಾಡಿ, ಪುಸ್ತಕದ ಜ್ಞಾನದ ಜೊತೆಗೆ ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯಗಳ ಮಹತ್ವ ಮತ್ತು ವೃತ್ತಿಗಳ ಬಗೆಗಿನ ಜ್ಞಾನವು ಅಗತ್ಯವಾಗಿದೆ. ಹಾಗಾದರೆ ಮಾತ್ರವೇ ಇಂದಿನ ಮಾರುಕಟ್ಟೆಯ ಪ್ರಪಂಚದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ವೃತ್ತಿ ಗುರಿಯನ್ನು ಸಾಧಿಸಲು ಜೀವನದಲ್ಲಿ ಹಲವಾರು ಅಡೆತಡೆಗಳು ಮತ್ತು ಸವಾಲುಗಳು ಸಾಮಾನ್ಯವಾಗಿ ಬರುತ್ತವೆ. ಅವುಗಳಿಗೆ ಅಂಜದೆ ಛಲದಿಂದ ಸಾಧಿಸುವಡೆಗೆ ಮಾತ್ರವೇ ನಮ್ಮ ಗಮನ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ಕೇವಲ ಎಂಜಿನಿಯರ್ ಮತ್ತು ವೈದ್ಯರು ವೃತ್ತಿಗಳಷ್ಟೇ ಅಲ್ಲ ಎಲ್ಲಾ ರೀತಿಯ ಕೌಶಲ್ಯಗಳಿಗೂ ಜಾಗತಿಕ ಮಾರುಕಟ್ಟೆಯ ಮೌಲ್ಯವಿದೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಸೃಷ್ಟಿಸಿಕೊಳ್ಳಲು ವೃತ್ತಿ ಮಾರ್ಗದರ್ಶನ ತರಬೇತಿಯ ಮೂಲಕ ಉತ್ತಮ ಗುರಿಯನ್ನು ಪ್ರೌಢಶಾಲಾ ಹಂತದಲ್ಲಿ ಹೊಂದಬೇಕು ಎಂದು ತಿಳಿಸಿದರು.
ವೃತ್ತಿ ಮೇಳದ ಭಾಗವಾಗಿ ವಿದ್ಯಾರ್ಥಿಗಳು ವಿವಿಧ ವೃತ್ತಿಗಳನ್ನು ಆಯ್ದುಕೊಳ್ಳಲು ಇರುವ ಶಿಕ್ಷಣದ ಮಾರ್ಗವನ್ನು ಕಿರು ನಾಟಕಗಳ ಮೂಲಕ ಪ್ರದರ್ಶಿಸಿದರು. ಗ್ರಾಮ್ ಸಂಸ್ಥೆಯ ಕಾರ್ಯಕ್ರಮ ಮುಖ್ಯಸ್ಥೆ ಉಷಾ, ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷ ರವಿಕುಮಾರ್, ಮುಖ್ಯ ಶಿಕ್ಷಕಿ ಯೋಗಲಕ್ಷ್ಮಿ ಮೊದಲಾದವರು ಇದ್ದರು.