ಪತ್ರಕರ್ತರು ವೃತ್ತಿಧರ್ಮ ಪಾಲಿಸಿ: ಶಿವಾನಂದ ತಗಡೂರು ಸಲಹೆ

| Published : Aug 14 2024, 12:49 AM IST

ಪತ್ರಕರ್ತರು ವೃತ್ತಿಧರ್ಮ ಪಾಲಿಸಿ: ಶಿವಾನಂದ ತಗಡೂರು ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಯಾರಾದರೂ ಮುಖ್ಯಮಂತ್ರಿಯಾಗಬೇಕು ಎಂದರೆ ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರದತ್ತ ನೋಡುತ್ತಾರೆ. ಇಲ್ಲಿಂದ ಆಯ್ಕೆಯಾದರೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂಬ ಪ್ರತೀತಿ ಇದೆ. ಆದರೂ ಜಿಲ್ಲೆಯಲ್ಲಿ ಇದುವರೆಗೂ ಪತ್ರಕರ್ತರ ಭವನ ಇಲ್ಲದಿರುವುದು ಬೇಸರದ ಸಂಗತಿ. ಎಲ್ಲರ ಸಹಕಾರ ಪಡೆದು ಸಂಘಟನೆಯನ್ನು ಬಲಪಡಿಸುವ ಜತೆಗೆ ಪತ್ರಕರ್ತರ ಭವನ ನಿರ್ಮಾಣಕ್ಕೆ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಪತ್ರಕರ್ತರು ವೃತ್ತಿಧರ್ಮ ಪಾಲಿಸುವ ಜೊತೆಗೆ ಸಂಘಟನೆಯ ಕೆಲಸಕ್ಕೂ ಒತ್ತು ನೀಡಬೇಕು. ಪತ್ರಕರ್ತರ ವೃತ್ತಿಗೆ ಯಾವುದೇ ರೀತಿಯಲ್ಲೂ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಬೇಕು. ಸಮಾಜ ನಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಲಹೆ ನೀಡಿದರು.

ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಜಿಲ್ಲಾ ಪತ್ರಕರ್ತರ ಸಮ್ಮಿಲನ, ಪತ್ರಿಕಾ ದಿನಾಚರಣೆ-೨೦೨೪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದ ಗೊಂಬೆಗಳು ವಿಶ್ವಾದ್ಯಂತ ಖ್ಯಾತಿ ಗಳಿಸಿದೆ. ಇದು ಐತಿಹಾಸಿಕ ಹಿನ್ನೆಲೆ ಇರುವ ಕ್ಷೇತ್ರ. ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಹುಟ್ಟಿದ ನಾಡು. ದೇಶಕ್ಕೆ ಪ್ರಧಾನಿ ಕೊಟ್ಟ ಜಿಲ್ಲೆ ಇದು. ಎಚ್.ಡಿ.ದೇವೇಗೌಡರು ಜಿಲ್ಲೆಯಿಂದಲೇ ಮುಖ್ಯಮಂತ್ರಿ, ಪ್ರಧಾನಮಂತ್ರಿಯೂ ಆದರು. ಎಚ್.ಡಿ.ಕುಮಾರಸ್ವಾಮಿ ಈ ಜಿಲ್ಲೆಯಿಂದಲೇ ಎರಡು ಬಾರಿ ಮುಖ್ಯಮಂತ್ರಿಯಾದರು. ಈಗಿನ ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಜಿಲ್ಲೆಯವರೇ ಎಂದು ಜಿಲ್ಲೆಯ ಹಿರಿಮೆ ಕುರಿತು ವಿವರಿಸಿದರು.

ಯಾರಾದರೂ ಮುಖ್ಯಮಂತ್ರಿಯಾಗಬೇಕು ಎಂದರೆ ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರದತ್ತ ನೋಡುತ್ತಾರೆ. ಇಲ್ಲಿಂದ ಆಯ್ಕೆಯಾದರೆ ಮುಖ್ಯಮಂತ್ರಿ ಆಗುವ ಯೋಗವಿದೆ ಎಂಬ ಪ್ರತೀತಿ ಇದೆ. ಆದರೂ ಜಿಲ್ಲೆಯಲ್ಲಿ ಇದುವರೆಗೂ ಪತ್ರಕರ್ತರ ಭವನ ಇಲ್ಲದಿರುವುದು ಬೇಸರದ ಸಂಗತಿ. ಎಲ್ಲರ ಸಹಕಾರ ಪಡೆದು ಸಂಘಟನೆಯನ್ನು ಬಲಪಡಿಸುವ ಜತೆಗೆ ಪತ್ರಕರ್ತರ ಭವನ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.

ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಮಾತನಾಡಿ, ಪತ್ರಕರ್ತರ ವೃತ್ತಿ ಸುಲಭವಲ್ಲ. ಪತ್ರಿಕೆ ನಡೆಸುವುದು ಇನ್ನೂ ಕಷ್ಟಕರ. ಹಿಂದೆ ಕೆಲವೇ ಕೆಲವು ಪತ್ರಿಕೆಗಳಿದ್ದವು. ಆದರೆ, ಈಗ ಪತ್ರಿಕೋದ್ಯಮ ಸಾಕಷ್ಟು ಬೆಳೆದಿದೆ. ದೃಶ್ಯ ಮಾಧ್ಯಮದಲ್ಲಿ ತ್ವರಿತವಾಗಿ ಸುದ್ದಿಗಳು ಬಿತ್ತರಗೊಂಡರೂ ಸುದ್ದಿಯ ಸಮಗ್ರತೆ ಸಿಗುವುದೇ ಪತ್ರಿಕೆಗಳಲ್ಲಿ ಎಂದು ಹೇಳಿದರು.

ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಸಮಾಜದ ಮೂರು ಆಧಾರ ಸ್ತಂಭಗಳು, ಅದರಲ್ಲಿ ಪತ್ರಿಕಾರಂಗ ಪ್ರಮುಖವಾದದ್ದು, ಈ ಮೂರು ಅಂಗಗಳ ಕುರಿತು ನಮಗೆ ಸರಿಯಾದ ಮಾಹಿತಿ ನೀಡುವುದೇ ಪತ್ರಿಕಾರಂಗ. ಪತ್ರಕರ್ತರು ವಸ್ತುನಿಷ್ಠ ಸುದ್ದಿಗೆ ಪ್ರಾಮುಖ್ಯತೆ ನೀಡಬೇಕು. ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡಾಗ ಎಚ್ಚೆತ್ತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಿದ ಸಾಕಷ್ಟು ಉದಾಹರಣೆ ನಮ್ಮ ಮುಂದಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಎಚ್.ಸಿ.ಜಯಮುತ್ತು ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಶಾಹಿ ಮಾಡುವ ತಪ್ಪುಗಳನ್ನು ತಿದ್ದುವ ಗುರುತ್ತರವಾದ ಜವಬ್ದಾರಿ ಪತ್ರಕರ್ತರ ಮೇಲೆ ಇದೆ. ಪತ್ರಕರ್ತರು ಯಾವುದೇ ಒತ್ತಡಕ್ಕೆ ಮಣಿಯದೇ ಸುದ್ದಿ ಪ್ರಕಟಿಸಬೇಕು. ಆ ನಿಟ್ಟಿನಲ್ಲಿ ತಾಲೂಕಿನ ಪತ್ರಕರ್ತರು ಹೆಚ್ಚು ಕ್ರಿಯಾಶೀಲಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಫಾರ್ಮಸಿಸ್ಟ್ ವೇದಮೂರ್ತಿಯನ್ನು ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕೆಯುಡಬ್ಲ್ಯೂಜೆ ಕಾರ್ಯದರ್ಶಿ ಮತ್ತೀಕೆರೆ ಜಯರಾಮು, ಜಿಪಂ ಮಾಜಿ ಸದಸ್ಯ ಎಸ್.ಗಂಗಾಧರ್, ಚನ್ನಪಟ್ಟಣ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎಂ.ಮಂಜುನಾಥ್, ಬಸವಪ್ಪ, ಶ್ರೀ ಚಾಮುಂಡೇಶ್ವರಿ ಪುಣ್ಯ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ, ಡಿವೈಎಸ್‌ಪಿ ಕೆ.ಸಿ.ಗಿರಿ, ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸೂರ್ಯ ಪ್ರಕಾಶ್, ಕಾರ್ಯದರ್ಶಿ ಶಿವರಾಜು, ರಾಜ್ಯ ಸಮಿತಿ ಸದಸ್ಯರಾದ ಚಲುವರಾಜು, ಸಿದ್ದಲಿಂಗೇಗೌಡ (ಮಧು), ಹಿರಿಯ ಪತ್ರಕರ್ತರಾದ ಸು.ತ.ರಾಮೇಗೌಡ, ರಮೇಶ್ ಗೌಡ, ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವೆಂಕಟಸುಬ್ಬಯ್ಯ ಚೆಟ್ಟಿ ಇತರರಿದ್ದರು.