95 ಗ್ರಾಂ ಚಿನ್ನಾಭರಣ ಕದ್ದ ಕೇರ್ ಟೇಕರ್ ಬಂಧನ

| Published : Apr 23 2025, 12:38 AM IST

ಸಾರಾಂಶ

ಹಾಸಿಗೆ ಹಿಡಿದಿದ್ದ ವಯೋವೃದ್ಧರ ಪಾಲನೆ ಮಾಡುವ ಕೇರ್ ಟೇಕರ್ ಕೆಲಸಕ್ಕೆ ಸೇರಿಕೊಂಡು, ಮನೆಯಲ್ಲಿಟ್ಟಿದ್ದ 95 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ, ₹8 ಲಕ್ಷ ಮೌಲ್ಯದ ಚಿನ್ನದ ಸರ ಸೇರಿದಂತೆ ಆಭರಣಗಳನ್ನು ಕೆಟಿಜೆ ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

- ವಿಜಯಪುರ ಜಿಲ್ಲೆ ಮಣ್ಣೂರು ವಿಜಯ್ ಅಲಿಯಾಸ್ ಭದ್ರಪ್ಪನಿಂದ ಸ್ವತ್ತು ಜಪ್ತಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಾಸಿಗೆ ಹಿಡಿದಿದ್ದ ವಯೋವೃದ್ಧರ ಪಾಲನೆ ಮಾಡುವ ಕೇರ್ ಟೇಕರ್ ಕೆಲಸಕ್ಕೆ ಸೇರಿಕೊಂಡು, ಮನೆಯಲ್ಲಿಟ್ಟಿದ್ದ 95 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ, ₹8 ಲಕ್ಷ ಮೌಲ್ಯದ ಚಿನ್ನದ ಸರ ಸೇರಿದಂತೆ ಆಭರಣಗಳನ್ನು ಕೆಟಿಜೆ ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲೂಕು ಮಣ್ಣೂರು ಗ್ರಾಮದ ವಿಜಯ್ ಅಲಿಯಾಸ್ ಭದ್ರಪ್ಪ (29) ಬಂಧಿತ ಆರೋಪಿ. ನಗರದ ಪಿ.ರಾಘವೇಂದ್ರ ತಮ್ಮ ತಂದೆ ಪದ್ಮನಾಭ ಶೆಟ್ಟಿ ಹಾಸಿಗೆ ಹಿಡಿದಿದ್ದರಿಂದ ಅವರನ್ನು ನೋಡಿಕೊಳ್ಳಲೆಂದು ಶ್ರೀ ಗುರು ಕೊಟ್ಟೂರೇಶ್ವರ ಹೋಂ ನರ್ಸಿಂಗ್ ಸರ್ವೀಸ್ ಏಜೆನ್ಸಿಯಿಂದ ತಿಂಗಳಿಗೆ ₹18 ಸಾವಿರ ವೇತನದಂತೆ ಆರೋಪಿ ವಿಜಯ್ ಅಲಿಯಾಸ್‌ ಭದ್ರಪ್ಪನನ್ನು ಮಾ.4ರಂದು ನೇಮಕ ಮಾಡಿದ್ದರು.

ಏ.1ರಂದು ಬೆಳಗ್ಗೆ ಮನೆಯ ವಾಡ್ರೋಬ್‌ ಡ್ರಾವರ್‌ನಲ್ಲಿಟ್ಟಿದ್ದ 95 ಗ್ರಾಂ ಚಿನ್ನಾಭರಗಳನ್ನು ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಪಿ.ರಾಘವೇಂದ್ರ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿ ಪತ್ತೆಗಾಗಿ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಬಿ.ಶರಣ ಬವೇಶ್ವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ವೃತ್ತ ನಿರೀಕ್ಷಕ ಎಚ್.ಎಸ್.ಸುನೀಲಕುಮಾರ ನೇತೃತ್ವದಲ್ಲಿ ಎಸ್‌ಐ ಆರ್.ಲತಾ, ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. ಏ.17ರಂದು ಆರೋಪಿಯನ್ನು ಬಂಧಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಕೋರ್ಟ್‌ ಅನುಮತಿ, ಆದೇಶ ಮೇರೆಗೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಪಿರ್ಯಾದಿ ಪಿ.ರಾಘವೇಂದ್ರಗೆ ಚಿನ್ನಾಭರಣ ಹಸ್ತಾಂತರಿಸಿದರು. ಸಿಬ್ಬಂದಿಯಾದ ಸುರೇಶ ಬಾಬು, ಮಹಮ್ಮದ್ ರಫೀ, ಗಿರೀಶ ಗೌಡ, ಸಿದ್ದಪ್ಪ, ಮಂಜಪ್ಪ, ಡಿ.ಬಿ.ನಾಗರಾಜ, ರವಿನಾಯ್ಕ, ಗೌರಮ್ಮ, ರಾಮಚಂದ್ರ ಜಾಧವ್‌, ಶಿವಕುಮಾರ, ಸಿದ್ಧಾರ್ಥ ಅವರಿದ್ದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಶ್ರಮಿಸಿತು.

- - -

-22ಕೆಡಿವಿಜಿ17, 18: ಆರೋಪಿ ವಿಜಯ್ ಅಲಿಯಾಸ್ ಭದ್ರಪ್ಪನನ್ನು ಪೊಲೀಸರು ಬಂಧಿಸಿ, ಆಭರಣ ವಶಕ್ಕೆ ಪಡೆದರು.