ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ರೋಗಿಗಳಿಗೆ ಕಾಳಜಿಯ ಆರೈಕೆ ನೀಡಿದಾಗ ಅವರಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬದುಕುಳಿವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಭಾರತ ಕ್ಯಾನ್ಸರ್ ರಿಲೀಫ್ ಸಂಸ್ಥೆಯ ಸಂಸ್ಥಾಪಕಿ ಲಂಡನ್‌ನ ಡಾ. ಜಿಲ್ಲಿ ಬರ್ನ್ ಅವರು ತಿಳಿಸಿದರು.ತುಮಕೂರು ನಗರ ಹೊರವಲಯದ ಅಗಳಕೋಟೆಯ ಡಾ.ಎಚ್.ಎಂ. ಗಂಗಾಧರಯ್ಯನವರ ಸ್ಮಾರಕ ಭವನದಲ್ಲಿ ಶ್ರೀ ಸಿದ್ದಾರ್ಥ ಕಾಲೇಜ್ ಆಫ್ ನರ್ಸಿಂಗ್ ಹಾಗೂ ಟಿ. ಬೇಗೂರು ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರೂಲ್ ಆಫ್ ನರ್ಸಿಂಗ್ ಪಿಲೇಟಿವ್‌ಕೇರ್’ ಎಂಬ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ವೈದ್ಯೋ ನಾರಾಯಣ ಹರಿ! ಎಂಬ ಗಾದೆ ಮಾತಿನಂತೆ ಆಸ್ಪತ್ರೆಗಳಲ್ಲಿ ವೈದ್ಯರಿಗಿಂತ ದಾದಿಯರ ಪಾತ್ರ ಬಹುಮುಖ್ಯವಾಗಿದ್ದು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳಿಗೂ ಸ್ವಾಗತಿಸಿ-ಉಪಚರಿಸಿ ಚೇತರಿಕೆ ಕಾಣುವವರೆಗೆ ಉತ್ತಮವಾದ ಕಾಳಜಿ ವಹಿಸಿ ಆರೈಕೆ ಮಾಡುವವರು ಶುಶ್ರೂಕಿಯರು ಎಂದರು.ರೋಗಿಗಳೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿ ಮಾತುಕತೆ ನಡೆಸುವ ಮೂಲಕ ರೋಗಿಗಳ ರೋಗ ನಿವಾರಣೆ ಮಾಡುವಲ್ಲಿ ದಾದಿಯರು ಯಶಸ್ವಿಯಾಗುತ್ತಿದ್ದು, ಲವಲವಿಕೆಯಿಂದ ಕೆಲಸ ಮಾಡಿದಾಗ ಸಾವಿನ ಹಂಚಿನಲ್ಲಿರುವ ರೋಗಿಗಳನ್ನು ಗುಣಪಡಿಸಿ ಆರೋಗ್ಯಕರವಾಗಿಸಬಹುದು ಎಂದು ಡಾ. ಜಿಲ್ಲಿ ಬರ್ನ್ ತಿಳಿಸಿದರು.
ಇಡೀ ಪ್ರಪಂಚಕ್ಕೆ ಮಾದರಿಯಾದ ಮದರ್ ತೆರೇಸಾ ಅವರಂತಹ ತಾಯಿಯ ಮನಸ್ಸು ಈಗಿನ ನರ್ಸ್‌ಗಳಲ್ಲಿ ಬೆಳೆಯಬೇಕು. ಹೀಗಿದ್ದಾಗ ಮಾತ್ರ ಪ್ರಪಂಚದಲ್ಲಿ ಅಮೂಲ್ಯವಾದ ಜೀವ ಎಂಬುದನ್ನು ಉಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸೇವಾ ಮನೋಭಾವನೆಯ ಜೊತೆಜೊತೆಗೆ ನಮ್ಮಕುಟುಂಬದವರೆ ಎಂದು ಕಾಳಜಿ ಹೊತ್ತು ರೋಗಿಗಳನ್ನು ಸತ್ಕರಿಸಬೇಕು ಎಂದು ಡಾ. ಜಿಲ್ಲಿ ಬರ್ನ್ ಅಭಿಪ್ರಾಯಪಟ್ಟರು.ಇಡೀ ಪ್ರಪಂಚವನ್ನೆ ಬೆಚ್ಚಿ ಬಿಳಿಸಿದ ಕರೋನದಂತಹ ಮಹಾಮಾರಿಯ ರೌದ್ರಾವತಾರಕ್ಕೆ ಸಾವಿರ ಜನರು ಬಲಿಯಾಗಿದ್ದ ಸಂದರ್ಭದಲ್ಲಿ ದಾದಿಯರು ತಮ್ಮ ಪ್ರಾಣವನ್ನು ಲೆಕ್ಕಕ್ಕಿಟ್ಟು ಮಾನವ ಸಂಕುಲವನ್ನು ರಕ್ಷಣೆ ಮಾಡಿದ್ದಾರೆ. ಮಹಾಮಾರಿಯ ಭೀತಿ ಎಂದು ಹೆದರದೆ ರೋಗಿಗಳಿಗೆ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ್ದಾರೆ. ಇಂತಹ ನರ್ಸ್‌ಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಕೆ. ಲಿಂಗೇಗೌಡ ಮಾತನಾಡಿ, ಭಾರತದಂತ ಸಮೃದ್ಧವಾದ ರಾಷ್ಟ್ರದಲ್ಲಿ ‘ಕ್ಯಾನ್ಸರ್ ರೀಲಿಫ್’ ಎಂಬ ಎನ್‌ಜಿಒ ಸಂಸ್ಥೆಯನ್ನು ಕಟ್ಟಿ, ನರ್ಸ್ ಇನ್ ಡಿಪ್ಲೋಮೋ ಪದವಿಯನ್ನು ಪಡೆದ ಡಾ. ಜಿಲ್ಲಿಬರ್ನ್ ಅವರು ಅಮೋಘವಾದ ಸೇವೆಯನ್ನು ನೀಡಿದ್ದಾರೆ. 72 ರ ಹರೆಯದಲ್ಲೂ ಇನ್ನಿಲ್ಲದ ಉತ್ಸಾಹ ಸೇವಾ ಮನೋಭಾವದ ಚಾಕಚಕ್ಯತೆ ಎಲ್ಲರನ್ನ ನಿಬ್ಬೆರಗಾಗುವಂತೆ ಮಾಡಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಡಾ. ಬರ್ನ್ ಅವರು ನರ್ಸುಗಳ ಒಡನಾಟ-ಸೇವೆ ತುಂಬಾ ಶ್ಲಾಘನೀಯವಾಗಿದೆ ಎಂದರು.ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಸದಸ್ಯೆ ಕನ್ನಿಕಾ ಪರಮೇಶ್ವರ್ ಮಾತನಾಡಿದರು. ಕಾರ್ಯಗಾರದಲ್ಲಿ ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟಾರ್ ಡಾ.ಎಂ. ಝಡ್ ಕುರಿಯನ್, ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಸಲಹೆಗಾರ ಡಾ. ವಿವೇಕ್ ವೀರಯ್ಯ, ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ. ಸಾಣಿಕೊಪ್ಪ, ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರವೀಣ್ ಕುಡ್ವಾ, ಸಿದ್ಧಾರ್ಥ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಜಿ. ಸುಜಾತಾ, ಟಿ. ಬೇಗೂರು, ಸಿದ್ದಾರ್ಥ ವೈದ್ಯಕೀಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಎನ್. ಸೇರಿದಂತೆ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ ವರ್ಗ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
BOXಕ್ಯಾನ್ಸರ್ ರಿಲೀಫ್ ಕೇಂದ್ರ ಸ್ಥಾಪನೆ
೧೯೯೦ರಲ್ಲಿ ಕ್ಯಾನ್ಸರ್ ರಿಲೀಫ್ ಕೇಂದ್ರವನ್ನ ಸ್ಥಾಪನೆ ಮಾಡುವ ಮೂಲಕ ಭಾರತದಲ್ಲಿನ ಗ್ರಾಮೀಣ ಪ್ರದೇಶದ ಕಡು ಬಡವರ ಆರೋಗ್ಯ ಕಾಳಜಿ ವಹಿಸಿ ಅನೇಕ ಪ್ರಾಣ ಉಳಿಸುವ ಪ್ರಯತ್ನ ಮಾಡಲಾಗಿದೆ. ಕೋಲ್ಕತ್ತಾ, ಅಹಮದಾಬಾದ್, ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಕ್ಯಾನ್ಸರ್ ರಿಲೀಪ್ ಉಪ ಶಾಖೆಗಳನ್ನು ತೆರಯಲಾಗಿದ್ದು, ಗ್ರಾಮೀಣ ಪ್ರದೇಶದ ಬಡವರು ಸೇರಿದಂತೆ ಅನೇಕರ ಆರೋಗ್ಯ ಕಾಳಜಿಯನ್ನು ವಹಿಸಲಾಗಿದೆ ಎಂದು ಡಾ. ಜಿಲ್ಲಿ ಬರ್ನ್ ಎಂದರು.