ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಭೂಮಿಯ ಕಾಳಜಿಯೇ ನಮ್ಮ, ನಿಮ್ಮೆಲ್ಲರ ಕಾಳಜಿ ಎಂದು ಶಿವಮೊಗ್ಗದ ಅದ್ವೈತ ಆಯುರ್ವೇದ ಚಿಕಿತ್ಸಾಲಯದ ವೈದ್ಯೆ ಡಾ.ಕೆ.ಎಸ್.ಪಲ್ಲವಿ ಹೇಳಿದರು.ಸಮೀಪದ ಜ್ಞಾನದೀಪ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಘೋಷಣೆಯೊಂದಿಗೆ ಪ್ರಪಂಚವೇ ಯೋಗ ದಿನವನ್ನು ಆಚರಿಸುತ್ತಿದೆ. ಮಾನಸಿಕ, ದೈಹಿಕ, ಬೌದ್ಧಿಕ, ಸಾಮಾಜಿಕ ವಿಕಾಸವಾಗಬೇಕಾದರೆ ಯೋಗವನ್ನು ಪ್ರತಿನಿತ್ಯ ಜೀವನದ ಭಾಗವಾಗಿ ಮಾಡಿಕೊಳ್ಳಬೇಕು. ಯಮ ನಿಯಮಗಳಾದ ಸತ್ಯ, ಅಹಿಂಸೆ, ಆಸ್ಥೇಯ, ಬ್ರಹ್ಮಚರ್ಯಗಳನ್ನು ನಮ್ಮ ಜೀವನದಲ್ಲಿ ಪರಿಪಾಲಿಸಬೇಕು. ದಿನನಿತ್ಯ ಭೂಮಿಯ ಜೊತೆ ಒಡನಾಟ ಮತ್ತು ಸಂಬಂಧ ಹೊಂದಬೇಕು ಎಂದರು.
ಜ್ಞಾನದೀಪ ಶಾಲೆಯ ಪ್ರಾಂಶುಪಾಲ ಶ್ರೀಕಾಂತ ಎಂ ಹೆಗಡೆ ಮಾತನಾಡಿ, ಇಂದಿನ ಜಗತ್ತಿನಲ್ಲಿ ಯೋಗ ವ್ಯಕ್ತಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅತಿ ಅವಶ್ಯಕವಾಗಿದೆ. ಅದಕ್ಕಾಗಿ ಕ್ರಿಯಾಶೀಲರಾಗಿ, ಸದೃಢರಾಗಿ, ಆರೋಗ್ಯವನ್ನು ಹೊಂದಲು ಅಮೂಲ್ಯ ಸಮಯವನ್ನು ಮೀಸಲಿಡಬೇಕು. ಮಕ್ಕಳು ಪ್ರತಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವಿಶ್ವಕ್ಕೆ ಯೋಗದ ಮಹತ್ವ ಸಾರಿದ ದೇಶ ನಮ್ಮ ಭಾರತ. ನಮ್ಮ ಮಕ್ಕಳಿಗೆ ಸಂಗೀತ, ಯೋಗ ಅತಿ ಮುಖ್ಯ ಎಂದರು.ಶಾಲೆಯ ಶಿಕ್ಷಕಿ ಜೆ.ಪಿ.ಶ್ವೇತಾ ಮತ್ತು ಅರುಣಾ ಪ್ರಕಾಶ್ ಸಾಮೂಹಿಕ ಯೋಗಾಸನ ಮಾಡಿಸಿ ಮಕ್ಕಳಿಗೆ ಯೋಗದ ಮಹತ್ವವನ್ನು ಮನವರಿಕೆ ಮಾಡಿದರು. ವಿಶ್ವ ಸಂಗೀತ ದಿನ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿ ಶ್ಯಾಮಲಾ ಸಂಗೀತ ದಿನದ ಮಹತ್ವವನ್ನು ವಿವರಿಸಿ ಮನುಷ್ಯನ ಪ್ರತಿ ಚಟುವಟಿಕೆಯಲ್ಲಿ ಸಂಗೀತವಿದೆ. ಹಿತಮಿತ, ಮಧುರ ಸಂಗೀತ ನಮ್ಮಲ್ಲರಿಗೂ ಆಸ್ವಾದ ನೀಡುತ್ತದೆ ಎಂದರು.
ಚನ್ನಗಿರಿ, ಭದ್ರಾವತಿ, ಕೈಮರ, ಗುರುಪುರ, ಶಿವಮೊಗ್ಗದ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಲೆಯಲ್ಲಿಯೂ ವಿಶ್ವ ಯೋಗ ದಿನ ಮತ್ತು ಸಂಗೀತ ದಿನ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ಅರಬಿಂದೊ ಫೌಂಡೇಶನ್ ಫಾರ್ ಎಜುಕೇಶನ್ ನ ಕಾರ್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ, ಶಾಲೆಯ ಹಿರಿಯ ಉಪಪ್ರಾಂಶುಪಾಲ ಡಾ ರೆಜಿ ಜೋಸೆಫ್, ವಾಣಿ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು. ಡಾ. ಪ್ರಕಾಶ್ ಬಣಕಾರ ಕಾರ್ಯಕ್ರಮ ನಿರೂಪಿಸಿದರು.