೨೦೨೫ರ ಜೂನ್‌ನಲ್ಲಿ ಕಾರ್ಮೆಲ್ ಹಬ್ಬ: ಟಿ.ಎಸ್.ಸತ್ಯಾನಂದ

| Published : Nov 10 2024, 01:32 AM IST

ಸಾರಾಂಶ

ಕಳೆದ ೬೨ ವರ್ಷಗಳಿಂದ ಈ ಶಾಲೆಯಲ್ಲಿ ಜ್ಞಾನಾರ್ಜನೆ ಮಾಡಿದ್ದ ಹಲವು ವಿದ್ಯಾರ್ಥಿಗಳು ಮಂಡ್ಯ ಸೇರಿದಂತೆ ರಾಜ್ಯ, ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ವಿವಿಧ ಸ್ಥರಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಗಮನ ಸೆಳೆದಿದ್ದು, ಅವರೆಲ್ಲರನ್ನೂ ಒಟ್ಟುಗೂಡಿಸಿ ಕಾರ್ಮೆಲ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾರ್ಮೆಲ್ ಕಾನ್ವೆಂಟ್ ಹಳೇ ವಿದ್ಯಾರ್ಥಿಗಳಿಂದ ೨೦೨೫ರ ಜೂ.೨ನೇ ಶನಿವಾರ ಮತ್ತು ಭಾನುವಾರ ನಗರದ ಸರ್ ಎಂ.ವಿ. ಕ್ರೀಡಾಂಗಣ ಅಥವಾ ಮಂಡ್ಯ ವಿವಿ ಆವರಣದಲ್ಲಿ ಕಾರ್ಮೆಲ್ ಹಬ್ಬವನ್ನು ಕುಟುಂಬಸ್ಥರೊಂದಿಗೆ ಎರಡು ದಿನಗಳ ಕಾಲ ನಡೆಯಲಿದೆ ಎಂದು ವಕೀಲ ಟಿ.ಎಸ್. ಸತ್ಯಾನಂದ ತಿಳಿಸಿದರು.

ನಗರದ ಕಾರ್ಮೆಲ್ ಕಾನ್ವೆಂಟ್ ಸಭಾಂಗಣದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿಗಳ ವತಿಯಿಂದ ನಡೆದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ೬೨ ವರ್ಷಗಳಿಂದ ಈ ಶಾಲೆಯಲ್ಲಿ ಜ್ಞಾನಾರ್ಜನೆ ಮಾಡಿದ್ದ ಹಲವು ವಿದ್ಯಾರ್ಥಿಗಳು ಮಂಡ್ಯ ಸೇರಿದಂತೆ ರಾಜ್ಯ, ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ವಿವಿಧ ಸ್ಥರಗಳಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಗಮನ ಸೆಳೆದಿದ್ದು, ಅವರೆಲ್ಲರನ್ನೂ ಒಟ್ಟುಗೂಡಿಸಿ ಕಾರ್ಮೆಲ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಕಾರ್ಮೆಲ್ ಶಾಲೆಯಲ್ಲಿ ಓದಬೇಕಾದರೆ ನಾವೆಲ್ಲರೂ ಮುಗ್ಧ ಮನಸ್ಸಿನಲ್ಲಿದೆವು ಈಗ ಪ್ರಬುದ್ಧ ರಾಗಿದ್ದೇವೆ. ಅಧ್ಯಾಪಕರು ನಮಗೆ ಕೊಟ್ಟ ವಿದ್ಯೆಯಿಂದ ಸಮಾಜದಲ್ಲಿ ನಾವು ಬೆಳೆದಿದ್ದೇವೆ. ಪ್ರತಿ ವರ್ಷ ಕಾರ್ಮೆಲ್ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳೆಲ್ಲ ಸೇರಿ ನವೆಂಬರ್ ಎರಡನೇ ಶನಿವಾರವನ್ನು ’ಕಾರ್ಮೆಲ್ ಅಲುಮಿನಿ ಡೇ’ ಎಂದು ಆಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಹಳೆಯ ವಿದ್ಯಾರ್ಥಿಗಳೆಲ್ಲರೂ ಕಾರ್ಮೆಲ್ ಶಾಲೆಗೆ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಮೆಲ್ ಕಾನ್ವೆಂಟ್ ಶಾಲೆ ಹಲವು ಏಳು-ಬೀಳುಗಳ ನಡುವೆಯೂ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅಂದಿನಿಂದಲೂ ಕಡಿಮೆ ಶುಲ್ಕದಲ್ಲಿ ೧೫ ಸಾವಿರ ರು.ಗಳಿಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಇಲ್ಲಿ ಬೇಡಿಕೆ ಇದೆ. ಇದನ್ನು ನಿಭಾಯಿಸುವ ಕೆಲಸ ಮಾಡಬೇಕಾಗಿದೆ ಇದಕ್ಕಾಗಿ ನಾವುಗಳು ಬೆನ್ನೆಲುಬಾಗಿ ನಿಲ್ಲಬೇಕಾಗಿದೆ ಎಂದರು.

ಇದೇ ವೇಳೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ತಮಗೆ ವಿದ್ಯಾಭ್ಯಾಸ ನೀಡಿದ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಮೆಲ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಗ್ಲಾಡಿಸ್ ಕ್ಯಾಸ್ಟಲಿನೋ, ಉದ್ಯಮಿ ಮನೋಹರ್, ಶಿಕ್ಷಕಿಯರಾದ ಶೋಭಾ ಮತ್ತು ಸೌಮ್ಯಲತಾ ಸೇರಿದಂತೆ ಇತರರು ಹಾಜರಿದ್ದರು.