ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಪ್ರದೇಶ, ಶಾಲಾ, ಕಾಲೇಜುಗಳಲ್ಲಿ ಸಹಾಯವಾಣಿ ಸಂಖ್ಯೆ ಪೋಸ್ಟರ್, ಜಾಗೃತಿ ಕಾರ್ಯಕ್ರಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕು. ಸಖಿ ಒನ್ ಸ್ಟಾಪ್ 1098 ಸಹಾಯವಾಣಿ ಸಂಪರ್ಕ 24*7 ನಿರಂತರ ಚಾಲನೆಯಲ್ಲಿರಬೇಕು. ಉಜ್ವಲ ಮಹಿಳಾ ಸಂರಕ್ಷಣೆ ಕೇಂದ್ರಗಳಲ್ಲಿ ಇತರೆ ರಾಜ್ಯಗಳಿಂದ ಬಂದ ಮಹಿಳೆಯರನ್ನು ರಕ್ಷಣೆ ಮಾಡಿ ಅವರಿಗೆ ಆಶ್ರಯ ನೀಡಲಾಗುತ್ತಿದೆ. ಹಣದ ಆಮಿಷದಿಂದ ಗಡಿ ಭಾಗದಲ್ಲಿನ ಹೆಚ್ಚಿನ ಮಹಿಳೆಯರು ಕಾಣೆಯಾಗಿರುವುದು ಕಂಡು ಬರುತ್ತದೆ. ಇದರ ಬಗ್ಗೆ ಜಿಲ್ಲಾಡಳಿತ ವರದಿ ಕೊಡಬೇಕು ಎಂದರು.ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಾಗೃತಿ ಕಾರ್ಯಕ್ರಮಗಳು ಆಗಿರುವ ಕುರಿತು ದಾಖಲೆಗಳನ್ನು ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಕಾವಲು ಸಮಿತಿ ರಚಿಸಲಾಗಿದೆ. ಮಹಿಳೆಯರ ದೌರ್ಜನ್ಯ, ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರತಿಯೊಂದು ಗ್ರಾಪಂನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿರುವ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಜೊತೆಗೆ ರಕ್ಷಣಾತ್ಮಕ ತರಬೇತಿ ಆಯೋಜನೆ ಮಾಡಲಾಗುತ್ತಿದೆ. ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಗಡಿ ಪ್ರದೇಶದಲ್ಲಿ, ಜನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕೂಡ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಾಂತ್ವನ ಕೇಂದ್ರದ ಸಮಾಲೋಚಕಿ ಲಲಿತಾ ಮಾತನಾಡಿ, ಜಿಲ್ಲೆಯಲ್ಲಿರುವ ಸಾಂತ್ವನ ಕೇಂದ್ರಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಅನುದಾನ ನೀಡಲಾಗುತ್ತಿದೆ. ವಿವಿಧ ಇಲಾಖೆಯ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದರು.ಈ ವೇಳೆ ಜಿಪಂ ಸಿಇಒ ರಾಹುಲ್ ಶಿಂಧೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಎಸಿಪಿ ಸದಾಶಿವ ಕಟ್ಟಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ, ವಿವಿಧ ಸಾಂತ್ವಾನ ಕೇಂದ್ರದ ಸಂಯೋಜಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.
------------------------- ಕೋಟ್..........ಸವದತ್ತಿ, ಗೋಕಾಕ, ರಾಮದುರ್ಗ, ಬೈಲಹೊಂಗಲ ತಾಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ 3 ತಿಂಗಳಿಗೊಂದು ತಾಲೂಕುಮಟ್ಟದ ಸಭೆ ಕರೆದು ಜಾಗೃತಿ ಮೂಡಿಸಬೇಕು ಮತ್ತು ಅದಕ್ಕೆ ಪೂರಕವಾದ ದಾಖಲೆ ಸಂಗ್ರಹಿಸಬೇಕು.
- ಡಾ.ನಾಗಲಕ್ಷ್ಮೀ ಚೌಧರಿ ಅಧ್ಯಕ್ಷೆ ರಾಜ್ಯ ಮಹಿಳಾ ಆಯೋಗ