ಸಾರಾಂಶ
ಸರ್ಕಾರದ ಅನುದಾನವು ವ್ಯರ್ಥವಾಗದಂತೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಗುತ್ತಿಗೆದಾರರಿಗೆ ಸೂಚಿಸಿದರು.
ಹೊನ್ನಾಳಿ: ಸರ್ಕಾರದ ಅನುದಾನವು ವ್ಯರ್ಥವಾಗದಂತೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಗುತ್ತಿಗೆದಾರರಿಗೆ ಸೂಚಿಸಿದರು.
ತಾಲೂಕಿನ ಬೀರಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಸದಾಶಿವಪುರದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು. ಸಾರ್ವಜನಿಕರಿಗೆ ಸದುಪಯೋಗ ಆಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ರಸ್ತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿದೆ. ಕಾಮಗಾರಿಗಳು ಕಳಪೆಯಾದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿಕೊಂಡು ಗುಣಮಟ್ಟದ ಕಾಮಗಾರಿಗಳಾಗುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕು. ಸದಾಶಿವಪುರ ಗ್ರಾಮದ ಗ್ರಾಮಸ್ಥರ ಬೇಡಿಕೆಯಂತೆ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ₹29.10 ಲಕ್ಷ ಅನುದಾನ ಮಂಜೂರು ಮಾಡಿಸಲಾಗಿದೆ. 370 ಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಬೀರಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಲೋಹಿತ್, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಶ್ವೇತಾ ಬಸವರಾಜ್, ಕವಿತಾ ರಮೇಶ್, ರಾಜು, ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ್, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ನಾಗಪ್ಪ, ಬಗರ್‌ಹುಕುಂ ಸಮಿತಿ ಸದಸ್ಯ ಕೊಡತಾಳ್ ರುದ್ರೇಶ್, ಮುಖಂಡರಾದ ಬೆನಕನಹಳ್ಳಿ ಎಚ್.ಜಿ. ಗಣೇಶ್, ಮಹೇಂದ್ರ, ಧನಂಜಯ್, ನಾಗೇಶ್ ನಾಡಿಗ್, ಸಾಸ್ವೆಹಳ್ಳಿ ಗ್ರಾಪಂ ಸದಸ್ಯ ಸಂತೋಷ್, ಜಿಪಂ ಎಇಇ ಮೋತಿಲಾಲ್, ಎಂಜಿನಿಯರ್ ನಾಗರಾಜ್, ಗುತ್ತಿಗೆದಾರ ಮಧುಕೃಷ್ಣ ರೆಡ್ಡಿ, ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.- - - -18ಎಚ್.ಎಲ್.ಐ2:
ಸದಾಶಿವಪುರದ ರಸ್ತೆ ಕಾಮಗಾರಿಗೆ ಶಾಸಕ ಡಿ.ಜಿ.ಶಾಂತನಗೌಡ ಗುದ್ದಲಿ ಪೂಜೆ ನೆರೆವೇರಿಸಿದರು.