ಸಾರಾಂಶ
ಗದಗ: ಯಾವುದೇ ಲೋಪದೋಷಗಳಿಗೆ ಆಸ್ಪದ ನೀಡದೇ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಬೇಕು ಪರಿಷ್ಕರಣಾ ಕಾರ್ಯ ಪಾರದರ್ಶಕ, ವ್ಯವಸ್ಥಿತವಾಗಿ ಜರುಗಿಸಿ ಅಂತಿಮ ಮತದಾರರ ಪಟ್ಟಿ ತಯಾರಿಕೆಗೆ ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾಯದರ್ಶಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ರಮಣದೀಪ ಚೌಧರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪರಿಶೀಲನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ವೀಕೃತವಾದಂತಹ ಅರ್ಜಿಗಳಲ್ಲಿನ ಮರಣ ಹೊಂದಿದವರ, ಹೆಸರುಗಳ ತಿದ್ದುಪಡಿ, ವರ್ಗಾವಣೆಗೆ ಸಂಬಂಧಿಸಿದಂತೆ ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಿ ಅನುಮೋದನೆ ನೀಡಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿ ವಿಳಂಬಕ್ಕೆ ಆಸ್ಪದ ನೀಡದೇ ಜಾಗರೂಕತೆಯಿಂದ ವಿಲೇವಾರಿ ಮಾಡಲು ತಿಳಿಸಿದರು.
ಮತದಾರರ ಪಟ್ಟಿಯಿಂದ ಕೈ ಬಿಡುವ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿ ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿನ ವಿಕಲಚೇತನ ಮತದಾರರು, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಫಾರ್ಮ ನಂ.6,ಫಾರ್ಮ ನಂ.7 ಜಿಲ್ಲೆಯಲ್ಲಿನ ಮತಗಟ್ಟೆಗಳ ವಿವರ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪರಿಷ್ಕರಣಾ ಕಾರ್ಯದಲ್ಲಿ ಜವಾಬ್ದಾರಿಯಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಬಿಎಲ್ಒಗಳ ಸಭೆ ಜರುಗಿಸಬೇಕೆಂದರು.ಮತದಾರರ ಪಟ್ಟಿಯಿಂದ ವಿವಿಧ ಕಾರಣಗಳಿಂದ ಹೆಸರು ತೆಗೆದು ಹಾಕುವ ಪ್ರಕ್ರಿಯೆ ಕುರಿತು ಸಂಬಂಧಿತ ಅಧಿಕಾರಿಗಳು ಪುನರ್ ಪರಿಶೀಲನೆ ಕೈಗೊಂಡು ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ವ್ಯವಸ್ಥಿತವಾಗಿ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ವಿವಿಧ ಕಾರಣಗಳಿಂದ ವಲಸೆ ಹೋಗಿರುವ, ನಿಧನ ಹೊಂದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯಲ್ಲಿ ಸಂಬಂಧಿತ ಅಧಿಕಾರಿಗಳು ಹೆಚ್ಚಿನ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 29-10-2024 ರವರೆಗೆ ಕರಡು ಮತದಾರರ ಪಟ್ಟಿಯ ಪ್ರಕಾರ 2,98,283 ಮತದಾರರಿದ್ದಾರೆ. ಆ ಪೈಕಿ 4,47,418 ಪುರುಷ ಮತದಾರರು, 4,50,865 ಮಹಿಳಾ ಮತದಾರರಿರುತ್ತಾರೆ ಎಂದು ತಿಳಿಸಿದ ಅವರು, ಫಾರ್ಮ ನಂ.6, ಫಾರ್ಮ ನಂ.7, ಫಾರ್ಮ ನಂ.8 ಕುರಿತು ಮಾಹಿತಿ ನೀಡಿದರು.ಕರಡು ಮತದಾರರ ಯಾದಿಗಳನ್ನು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ www.ceokarnataka.kar.nic.in ದಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಭರತ್.ಎಸ್.,ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ.,ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ.ಕೆ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.