ಮೂಣಕಾಲುದ್ದ ನೀರಲ್ಲೇ ಶವ ಹೊತ್ತು ಸಾಗಿ, ಅಂತ್ಯಸಂಸ್ಕಾರ

| Published : Jul 26 2024, 01:34 AM IST

ಸಾರಾಂಶ

ಹರಿಹರದ ಹೊರವಲಯದ ಗುತ್ತೂರು ಗ್ರಾಮದಲ್ಲಿ ರುದ್ರಭೂಮಿ ಜಲಾವೃತವಾಗಿದ್ದರಿಂದ ಗುರುವಾರ ಶವ ಸಂಸ್ಕಾರಕ್ಕಾಗಿ ಶವವನ್ನು ಹೊತ್ತು ಸಂಬಂಧಿಕರು ನದಿ ನೀರಲ್ಲೆ ಸಾಗಿದರು.

ಕನ್ನಡಪ್ರಭ ವಾರ್ತೆ ಹರಿಹರ

ಮಳೆಗಾಲದಲ್ಲಿ ಇಲ್ಲಿನ ಜನ ಮೃತ ಪಟ್ಟರೆ, ಶವ ಸಂಸ್ಕಾರಕ್ಕೆ ಸಂಕಷ್ಟ ಪಡಬೇಕಾಗಿದೆ. ಮೈದುಂಬಿ ಹರಿಯುತ್ತಿರುವ ತುಂಗಭದ್ರ ನದಿ ಹಿನ್ನೀರಿನಿಂದಾಗಿ ರುದ್ರಭೂಮಿ ಜಲಾವೃತರಾಗಿದ್ದರಿಂದ ಶವಸಂಸ್ಕಾರಕ್ಕೆ ಸಂಬಂಧಿಗಳು ಹರಸಾಹಸ ಪಡುವ ಪ್ರಸಂಗ ಹೊರವಲಯದ ಗುತ್ತೂರಿನಲ್ಲಿ ಗುರುವಾರ ನಡೆದಿದೆ.

ನಗರದ ಹೊರವಲಯದ ಗುತ್ತೂರು ವಾಸಿ ಮಂಜಪ್ಪ ಎಚ್.ಎಂ.ಸಿ.ಮೃತಪಟ್ಟಿದ್ದು, ಗುರುವಾರ ಮಧ್ಯಾಹ್ನ ಇವರ ಶವಸಂಸ್ಕಾರ ನಡೆಯುವುದಿತ್ತು. ನದಿ ಮೈದುಂಬಿ ಹರಿಯುತ್ತಿದ್ದು ನದಿ ದಡದಲ್ಲಿರುವ ರುದ್ರಭೂಮಿ ಜಲಾವೃತವಾದ ಪರಿಣಾಮ ಶವಸಂಸ್ಕಾರ ಹೇಗೆ ಮಾಡುವುದೆಂಬ ಚಿಂತೆ ಸಂಬಂಧಿಕರಿಗೆ ಶುರುವಾಯಿತು.

ಶವವನ್ನು ಹೊತ್ತು ಬಂದಾಗ ರುದ್ರಭೂಮಿಯಲ್ಲಿ ಕಾಲಿಡಲು ಸಾಧ್ಯವಿರಲಿಲ್ಲ. ಕೊನೆಗೆ ಅವರಲ್ಲೆ ಈಜು ಬಲ್ಲ ಕೆಲ ಯುವಕರು ಶವದ ಚಟ್ಟಾವನ್ನು ಎತ್ತಿಕೊಂಡು ಸೊಂಟ ಮಟ್ಟದ ನದಿ ನೀರಲ್ಲೆ ಸಾಗಿ ನದಿ ನಡುಗಡ್ಡೆಯ ಎತ್ತರದ ಪ್ರದೇಶಕ್ಕೆ ಶವವನ್ನು ಸಾಗಿಸಿ ಶವಸಂಸ್ಕಾರದ ಪ್ರಕ್ರಿಯೆ ನೆರೆವೇರಿಸಿದ ಘಟನೆ ನಡೆದಿದೆ.

ಮಹಿಳೆಯರು ಹಾಗೂ ಈಜು ಬಾರದವರು ನದಿ ತೀರದಲ್ಲೆ ನಿಂತು ಶವ ಸಂಸ್ಕಾರದ ಪ್ರಕ್ರಿಯೆ ವೀಕ್ಷಿಸಿದರು. ಸಂಬಂಧಿಕರಿಗೆ ತಮ್ಮ ಆತ್ಮೀಯರ ಸಾವಿನ ದುಖಃ ಒಂದೆಡೆಯಾದರೆ, ಶವ ಹೋಳಲು ಎದುರಾದ ಸಂಕಷ್ಟದಿಂದ ಮತ್ತಷ್ಟು ವಿಚಲಿತರಾದರು.

ಗುತ್ತೂರು ಹಾಗೂ ಸುತ್ತಲಿನ ಪ್ರದೇಶದ ನದಿ ತೀರದಲ್ಲಿ ಲಂಗು, ಲಗಾಮು ಇಲ್ಲದೆ ಅಕ್ರಮ ಮಣ್ಣು, ಮರಳು ಗಾರಿಕೆಯ ಪರಿಣಾಮವಾಗಿ ನದಿ ದಡದ ರುದ್ರಭೂಮಿ ಗುಂಡಿಯಾಗಿ ಪರಿಣಮಿಸಿದೆ, ಹೀಗಾಗಿ ಮಳೆಗಾಲದಲ್ಲಿ ನದಿ ನೀರು ಸುಲಭವಾಗಿ ರುದ್ರಭೂಮಿಗೆ ನುಗ್ಗುತ್ತದೆ ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹರಿಹರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಸಮುದಾಯದವರ ರುದ್ರಭೂಮಿಗಳ ಸ್ಥಿತಿಯೂ ಹೀಗೆಯೆ ಇದ್ದು, ಎತ್ತರದ ಪ್ರದೇಶದಲ್ಲಿ ಸರ್ಕಾರ ರುದ್ರಭೂಮಿಗೆ ಜಮೀನು ಮಂಜೂರು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.