ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ವಿರುದ್ಧ ಅತ್ಯಂತ ಅವಸರದಲ್ಲಿ ಬಿಎನ್‌ಎಸ್ 126 (2), 352, 351 (2) ಜಾತಿ ನಿಂದನೆ ಕೇಸ್ ಹಾಕಿದ್ದು, ಇನ್ನೂ ಬಹಳಷ್ಟು ಸೆಕ್ಷನ್‌ಗಳಿದ್ದವು. ಅವನ್ನೂ ಹಾಕಬಹುದಿತ್ತಲ್ಲ?, ಯಾಕೆ ಹಾಕಿಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯ ವೈಖರಿಗೆ ಹರಿಹಾಯ್ದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ವಿರುದ್ಧ ಅತ್ಯಂತ ಅವಸರದಲ್ಲಿ ಬಿಎನ್‌ಎಸ್ 126 (2), 352, 351 (2) ಜಾತಿ ನಿಂದನೆ ಕೇಸ್ ಹಾಕಿದ್ದು, ಇನ್ನೂ ಬಹಳಷ್ಟು ಸೆಕ್ಷನ್‌ಗಳಿದ್ದವು. ಅವನ್ನೂ ಹಾಕಬಹುದಿತ್ತಲ್ಲ?, ಯಾಕೆ ಹಾಕಿಲ್ಲ ಎಂದು ಜೆಡಿಎಸ್ ನಾಯಕ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯ ವೈಖರಿಗೆ ಹರಿಹಾಯ್ದರು.ನಗರದಲ್ಲಿ ಶನಿವಾರ ತಮ್ಮ ಮಿತ್ರ ಪಕ್ಷ ಬಿಜೆಪಿ ಶಾಸಕ ಬಿ.ಪಿ.ಹರೀಶ್ ದಾವಣಗೆರೆ ತಾ. ಕಾಡಜ್ಜಿ ಗ್ರಾಮದ ಕೃಷಿ ಇಲಾಖೆ ಫಾರಂನಿಂದ 5 ಸಾವಿರ ಲೋಡ್‌ಗೂ ಅದಿಕ ಮಣ್ಣು ಲೂಟಿ ಮಾಡಿದ್ದ ಸ್ಥಳಕ್ಕೆ ಗ್ರಾಮಾಂತರ ಎಸ್ಐ, ಕೃಷಿ ಅಧಿಕಾರಿ ಸಮೇತ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಜಾತಿ ನಿಂದನೆ ಕೇಸ್ ದಾಖಲಿಸಿದ್ದನ್ನು ತೀವ್ರವಾಗಿ ಖಂಡಿಸುತ್ತೇನೆ. ಶಾಸಕ ಹರೀಶ್ ಪರ ತಾವು, ತಮ್ಮ ಪಕ್ಷದ ಬೆಂಬಲ ಇದೆ ಎಂದರು.
ಬಿಎನ್ಎಸ್ 126-ಅಕ್ರಮ ನಿಯಂತ್ರಣ, ಸೆಕ್ಷನ್ 352-ಉದ್ದೇಶಪೂರ್ವಕವಾಗಿ ಪ್ರಚೋದನೆ, ಶಾಂತಿ ಕದಡುವಿಕೆ, ಸಾರ್ವಜನಿಕ ಶಾಂತಿ ಭಂಗ, ಆಸ್ತಿಗೆ ಧಕ್ಕೆ ಮಾಡುವ ಆರೋಪದಡಿ ಕೇಸನ್ನು ಬಿ.ಪಿ.ಹರೀಶ ಮೇಲೆ ದಾಖಲು ಮಾಡಲಾಗಿದೆ. ಅದೇ ಕಾಡಜ್ಜಿ ಗ್ರಾಮದ ಭೋವಿ ಸಮುದಾಯದ ಎಚ್.ಕಾಂತರಾಜು ಎಂಬ ವ್ಯಕ್ತಿಯಿಂದ ಜಾತಿ ನಿಂದನೆ ದೂರು ದಾಖಲು ಮಾಡಿಸಿದ್ದಾರೆ. ಕೇಸ್ ಮಾಡುವ ಮುನ್ನ ಕಾಂತರಾಜು ಮನೆಯಲ್ಲಿ, ಹಿರಿಯರ ಬಳಿ ಬಹಳ ಚರ್ಚಿಸಿದ್ದರಂತೆ ಎಂದು ವ್ಯಂಗ್ಯವಾಡಿದರು.ಶಾಸಕ ಹರೀಶ ವಿರುದ್ಧ ಕಾಡಜ್ಜಿ ಗ್ರಾಮದ ಕಾಂತರಾಜು ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿ, ಭೋವಿ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡಬಾರದು. ಕಾಂತರಾಜುಗೆ ನಿಜವಾಗಲೂ ಜಾತಿ ನಿಂದನೆಯಾಗಿದ್ದರೆ ನಾನು ನ್ಯಾಯ ಕೊಡಿಸುತ್ತೇನೆ. ಯಾರದ್ದೋ ನೆರಳಲ್ಲಿ ಸುಳ್ಳು ಕೇಸ್ ನೀಡಿ, ಬೆಳೆಯುವುದಕ್ಕೆ ಸಾಧ್ಯವಿಲ್ಲ. ಶಾಸಕ ಹರೀಶ ಕಾಡಜ್ಜಿಗೆ ಭೇಟಿ ನೀಡಿದ್ದ ವೇಳೆ ಬೇರೆಯವರು ಯಾರೂ ಇರಲಿಲ್ಲವಾ? ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿ, ನಿಮ್ಮ ಊರಿನ ಹೆಸರನ್ನು ಹಾಳು ಮಾಡಬೇಡಿ. ಹರೀಶ್ ಮೇಲೆ ದಾಖಲಿಸಿದ ಕೇಸ್ ಗೆ ಬಿ ರಿಪೋರ್ಟ್ ಹಾಕಿ, ಕೇಸ್ ಹಿಂಪಡೆಯಲಿ ಎಂದರು.
ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಅಮಾನುಲ್ಲಾ ಖಾನ್, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಕಡತಿ ಅಂಜಿನಪ್ಪ, ಉತ್ತರ ಅಧ್ಯಕ್ಷ ಬಾತಿ ಶಂಕರ್, ರಾಜ್ಯ ಕಾರ್ಯದರ್ಶಿ ಟಿ.ಅಸ್ಗರ್, ಯುವ ಘಟಕದ ಅಧ್ಯಕ್ಷ ಎ.ಶ್ರೀನಿವಾಸ ಇತರರು ಇದ್ದರು.ಗುಡ್ಡದ ಮಣ್ಣು ಅಕ್ರಮ ಸಾಗಾಟ: ಲೋಕಾಗೆ ದೂರು ಎಚ್ಚರಿಕೆ
ಕಾಡಜ್ಜಿ ಕೃಷಿ ಇಲಾಖೆ ಫಾರಂ ಹಾಗೂ ಬಾತಿ ಗುಡ್ಡ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡಿದವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವ ಜೊತೆಗೆ ಶಾಸಕ ಬಿ.ಪಿ.ಹರೀಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದರ ವಿರುದ್ಧವೂ ಬಿಜೆಪಿ ಜೊತೆಗೂಡಿ ಹೋರಾಟ ನಡೆಸುವುದಾಗಿ ಜೆಡಿಎಸ್ ನಾಯಕ, ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದ್ದಾರೆ.ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಮಂತ್ರಿ ಎಸ್ಸೆಸ್ ಮಲ್ಲಿಕಾರ್ಜುನ ಒಡೆತನದ ಕಲ್ಲೇಶ್ವರ ಮಿಲ್ ಹಿಂಭಾಗದ ಜಾಗ ಸಮತಟ್ಟು ಮಾಡಲು ಕಾಡಜ್ಜಿ ಕೃಷಿ ಇಲಾಖೆಗೆ ಸೇರಿದ ಜಾಗದ ಮಣ್ಣು ಹಾಗೂ ಬಾತಿ ಗುಡ್ಡದ ಮಣ್ಣನ್ನು ಅಕ್ರಮವಾಗಿ ಒಯ್ದಿದ್ದು, ಈ ಬಗ್ಗೆ ಲೋಕಾಯುಕ್ತಕ್ಕೆ ಎಲ್ಲಾ ದಾಖಲೆಗಳ ಸಮೇತ ದೂರು ನೀಡುತ್ತೇನೆ ಎಂದರು.
ಕಾಡಜ್ಜಿ ಕೃಷಿ ಫಾರಂನಿಂದ 5 ಸಾವಿರ ಲೋಡ್ ಮಣ್ಣು, ಬಾತಿ ಗುಡ್ಡದ ಮಣ್ಣನ್ನು 15 ದಿನದಿಂದ ನಿರಂತರ ತಂದರೂ ಜಿಲ್ಲಾಡಳಿತ, ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಕೃಷಿ ಇಲಾಖೆ ಗಮನಕ್ಕೆ ಬರಲೇ ಇಲ್ಲವೇ? ಇಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಗಮನಕ್ಕೆ ಬರಲೇ ಇಲ್ಲವೇ? ಜಿಲ್ಲೆಯಲ್ಲಿ ಅಧಿಕಾರಿಗಳು ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ.ಎಚ್.ಎಸ್.ಶಿವಶಂಕರ ಮಾಜಿ ಶಾಸಕ