ಸಾರಾಂಶ
ಉಳ್ಳಾಲ: ಲೋಕಾಯುಕ್ತರಿಗೆ ದೂರಿನೊಂದಿಗೆ ಸರಿಯಾದ ದಾಖಲೆಗಳನ್ನು ಕೊಡಬೇಕಾಗುತ್ತದೆ. ಸುಳ್ಳು ಕೇಸ್ ಕೊಟ್ಟರೆ ಕೇಸ್ ಹಾಕಿದವರ ಮೇಲೆಯೇ ಪ್ರಕರಣ ದಾಖಲಿಸಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಕೇಸ್ ಕೊಡಬಹುದು ಎಂದು ಕರ್ನಾಟಕ ಲೋಕಾಯುಕ್ತದ ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಹೇಳಿದ್ದಾರೆ.ಮಂಗಳವಾರ ಉಳ್ಳಾಲ ನಗರಸಭೆಯಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಲೋಕಾಯುಕ್ತ ಸಂಸ್ಥೆಯು ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಹಾಗೂ ಕುಂದು ಕೊರತೆ ಸ್ಪೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಯಾರೇ ಆಗಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು. ಸರ್ಕಾರಿ ಇಲಾಖೆಯ ಒಳಗಡೆ ಮೇಲಾಧಿಕಾರಿಗಳು ಕಿರಿಯ ಅಧಿಕಾರಿಗಳಿಂದ ಲಂಚ ಕೇಳಿದರೂ ದೂರು ನೀಡಬಹುದು. ಎಲ್ಲ ಅಧಿಕಾರಿಗಳು ತಾವು ಕಚೇರಿಗೆ ಬರುವಾಗ ಎಷ್ಟು ಹಣವನ್ನು ತಂದಿದ್ದಾರೆ ಹಾಗೂ ಹೋಗುವಾಗ ಎಷ್ಟಿದೆ ಎಂಬುವುದನ್ನು ಸರ್ಕಾರ ಕೊಟ್ಟ ಕ್ಯಾಶ್ ಡಿಕ್ಲರೇಷನ್‌ನಲ್ಲಿ ಬರೆದಿರಬೇಕು ಎಂದು ತಿಳಿಸಿದರು.ಆಡಳಿತಾತ್ಮಕ ವ್ಯವಸ್ಥೆಗೆ ಸಂಬಂಧಿಸಿದ ಪ್ರಕರಣ ದಾಖಲಿಸುವಂತಿಲ್ಲ ಹಾಗೂ ಸುಳ್ಳು ಕೆಸ್ ದಾಖಲಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಲೋಕಾಯುಕ್ತ ಯಾರಿಗೂ ಕರೆ ಮಾಡುವುದಿಲ್ಲ:
ಅಧಿಕಾರಿಗಳಿಗೆ ಲೋಕಾಯುಕ್ತ ಎಂಬ ಹೆಸರಿನಿಂದ ಕರೆ ಬಂದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ.ನಿಮ್ಮ ಮೇಲೆ ಕೇಸ್ ಹಾಕಲಾಗಿದೆ. ಬಿ ರಿಪೋರ್ಟ್ ಮಾಡುತ್ತೇವೆ, ಇಷ್ಟು ಹಣ ಕೊಡಿ ಎಂಬ ಕರೆ ಬಂದಿದ್ದರೆ ದಯವಿಟ್ಟು ಅದಕ್ಕೆ ಪತ್ರಿಕ್ರಿಯೆ ನೀಡಬೇಡಿ ಅದರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ ಗೆ ದೂರು ನೀಡಿ ಎಂದರು.ಲಂಚ ಕೇಳುವವರ ಜೊತೆಗೆ, ಲಂಚ ಕೊಡುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ ಎಚ್ಚರಿಕೆ ನೀಡಿದ್ದಾರೆ.ಉಳ್ಳಾಲ ತಾಲೂಕು ದಂಡಾಧಿಕಾರಿ ಪ್ರಶಾಂತ್ ಪಾಟೀಲ್, ಮಂಗಳೂರು ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ಗಾನ ಪಿ.ಕುಮಾರ್, ಇನ್‌ಸ್ಪೆಕ್ಟರ್ ಭಾರತಿ, ಉಳ್ಳಾಲ ನಗರಸಭೆ ಪ್ರಭಾರ ಪೌರಾಯುಕ್ತ ನವೀನ್ ಹೆಗ್ಡೆ ಲೋಕಾಯುಕ್ತ ಅದಾಲತ್‌ನಲ್ಲಿ ಉಪಸ್ಥಿತರಿದ್ದರು.