ಸಾರಾಂಶ
ಹುಬ್ಬಳ್ಳಿ:
ಇಲ್ಲಿನ ಹಳೇಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಕೇಸ್ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದು ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳಲ್ಲಿ ಆಕ್ರೋಶವನ್ನುಂಟು ಮಾಡಿದೆ. ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ಉಗ್ರ ಹೋರಾಟ ನಡೆಸಲು ನಿರ್ಧರಿಸಿವೆ.2022ರ ಏಪ್ರಿಲ್‌ನಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಬಳಿ ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದ್ದರು. ಆಗ ಪ್ರಾರ್ಥನಾ ಮಂದಿರದ ಗೋಡೆಯ ಮೇಲೆ ಲೇಜರ್ ಮೂಲಕ ಜೈ ಶ್ರೀರಾಮ ಎಂಬುದು ಅಕ್ಷರ ರೂಪದಲ್ಲಿ ಮೂಡಿತ್ತು. ಇದನ್ನು ಖಂಡಿಸಿ ಪ್ರತಿಭಟನೆ ನಡೆದಿತ್ತು. ಪೊಲೀಸ್ ಠಾಣೆಗೆ ನುಗ್ಗಿ ವಾಹನಗಳನ್ನು ಜಖಂ ಮಾಡಿದ್ದರು. ಪೊಲೀಸ್ ಠಾಣೆ, ದೇವಸ್ಥಾನಗಳ ಮೇಲೂ ಕಲ್ಲು ತೂರಾಟ ನಡೆದಿತ್ತು. ಆ ಘಟನೆಯಿಂದ ಇಡೀ ಹುಬ್ಬಳ್ಳಿಯೇ ಹೊತ್ತಿ ಉರಿದಿತ್ತು. ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 156 ಜನರನ್ನು ಪೊಲೀಸರು ಬಂಧಿಸಿದ್ದರು. ಹಲವು ತಿಂಗಳಗಟ್ಟಲೇ ಆರೋಪಿಗಳು ಜೈಲಲ್ಲಿದ್ದು ಇತ್ತೀಚಿಗಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಕೇಸ್ ಹಿಂಪಡೆಯಲು ನಿರ್ಧಾರ:ಇದೀಗ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಲವು ಕೇಸ್‌ಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಅದರಲ್ಲಿ ಹಳೇಹುಬ್ಬಳ್ಳಿಯ ಗಲಭೆ ಕೂಡ ಒಂದಾಗಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಸಂಬಂಧ ಬಿಜೆಪಿ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿರುವ ಮುಖಂಡರು, ಇದರ ವಿರುದ್ಧ ಬಹಿರಂಗ ಹಾಗೂ ಕಾನೂನಾತ್ಮಕ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಹಂತವಾಗಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿರುವ ಬಿಜೆಪಿ, ನಂತರ ಹಂತ-ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನ ಕೈಗೊಂಡಿದೆ.
ಮುಡಾ ಕೇಸ್‌ನಿಂದ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವುದರ ತಂತ್ರಗಾರಿಕೆ ಇದು ಎಂದು ಬಿಜೆಪಿ ಕಿಡಿಕಾರಿದೆ.