ಗ್ರಾಪಂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು: ನ್ಯಾಯ ಸಮ್ಮತ ತನಿಖೆಗೆ ಒತ್ತಾಯ

| Published : Apr 09 2024, 12:50 AM IST

ಸಾರಾಂಶ

ಏ.5ರಂದು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಪಂ ಪಿಡಿಒ, ಗ್ರಾಪಂ ಅಧ್ಯಕ್ಷರು ಮತ್ತು ಸಿಬ್ಬಂದಿ ಸೇರಿದಂತೆ 8 ಜನ ವಿರುದ್ಧ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೂವಿನಹಡಗಲಿ: ತಾಲೂಕಿನ ಮೋರಿಗೇರಿ ಪಿಡಿಒ ಸೇರಿ ಗ್ರಾಪಂ ಸಿಬ್ಬಂದಿ, ನರೇಗಾ ಸಿಬ್ಬಂದಿ ಸೇರಿ 8 ಜನರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ನ್ಯಾಯ ಸಮ್ಮತವಾದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ಗ್ರಾಪಂ ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾರ್ಕು ಘಟಕವು ತಾಪಂ ಇಒಗೆ ಮನವಿ ಸಲ್ಲಿಸಿದ್ದಾರೆ.ಪಟ್ಟಣದ ಲಾಲ್‌ ಬಹದ್ಧೂರ್‌ ಶಾಸ್ತ್ರಿ ವೃತ್ತದಲ್ಲಿ ಸಂಘದ ಸದಸ್ಯರು ಸಮಾವೇಶಗೊಂಡಿದ್ದರು. ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಪ್ತಿಯ ಮೋರಿಗೇರಿ ಗ್ರಾಪಂನಲ್ಲಿ 2024-25ನೇ ಸಾಲಿನಲ್ಲಿ ತೀವ್ರ ಬರಗಾಲ ಇರುವುದರಿಂದ ಏ.1ರಿಂದ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಕ್ರಮ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಮೋರಿಗೇರಿ ಪಿಡಿಒ, ಗ್ರಾಪಂ ಸಿಬ್ಬಂದಿ ಮತ್ತು ನರೇಗಾ ಸಿಬ್ಬಂದಿ ಸರ್ವೆ ನಂ.654/ಎ ವಿಸ್ತೀರ್ಣ 5 ಎಕರೆಯಲ್ಲಿ ಸರ್ಕಾರಿ ಭೂಮಿ ಗುರುತಿಸಿ ನರೇಗಾ ಕೂಲಿಕಾರ್ಮಿಕರಿಗೆ ಕೆಲಸ ನೀಡಲು ಈ ಕಾಮಗಾರಿ ಆಯ್ಕೆ ಮಾಡಿಕೊಂಡಿದೆ. ಮೋರಿಗೇರಿ ಗ್ರಾಮದ ಸ.ನಂ.654/ಎರಲ್ಲಿ ಗೋಮಾಳದಲ್ಲಿ 272 ಕಾರ್ಮಿಕರಿಗೆ ಕಾನೂನು ಪ್ರಕಾರ ಕೂಲಿ ಕೆಲಸ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದರೆ ಮೈಲಮ್ಮ ದಿದ್ಗಿ ಈ ಜಮೀನು ನಮ್ಮದೆಂದು ಯಾವುದೇ ದಾಖಲೆ ಇಲ್ಲದೇ ಜಾಗದಲ್ಲಿ ಪದೇ ಪದೇ ವಾಗ್ವಾದ ನಡೆಸುತ್ತಾ, ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಈ ಕುರಿತು ಅವರಿಗೆ ತಿಳಿವಳಿಕೆ ಹೇಳಿ ಕಳಿಸಿದರೂ, ಏ.5ರಂದು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಪಂ ಪಿಡಿಒ, ಗ್ರಾಪಂ ಅಧ್ಯಕ್ಷರು ಮತ್ತು ಸಿಬ್ಬಂದಿ ಸೇರಿದಂತೆ 8 ಜನ ವಿರುದ್ಧ ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ನ್ಯಾಯ ಸಮ್ಮತವಾಗಿ ತನಿಖೆ ಮಾಡಬೇಕೆಂದು ಮನವಿಯಲ್ಲಿ ತಿ‍ಳಿಸಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಅಶೋಕ, ಗೌರವಾಧ್ಯಕ್ಷ ಎ.ಕೊಟ್ರಗೌಡ, ಪಿಡಿಒ ವೀರಣ್ಣ ನಾಯ್ಕ, ತಾಪಂ ಎಡಿ ಹೇಮಾದ್ರಿ ನಾಯ್ಕ ಸೇರಿದಂತೆ ಸರ್ಕಾರಿ ನೌಕರರ ಸಂಘದ ಸದಸ್ಯರು, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ವರ್ಗ ತಾಪಂ ಇಒಗೆ ಮನವಿ ಸಲ್ಲಿಸಿದರು.