ಮತದಾರರ ಪಟ್ಟಿಯಲ್ಲಿ ಮನೆ ಸಂಖ್ಯೆ ಇಲ್ಲದ ಹಾಗೂ ನಕಲಿ ವಿಳಾಸ ಹೊಂದಿರುವ ಮತದಾರರ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಕ್ಕೆ, 32 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಪ್ರಕಾಶ್ ಖಂಡ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಭಾಲ್ಕಿ
ಮತದಾರರ ಪಟ್ಟಿಯಲ್ಲಿ ಮನೆ ಸಂಖ್ಯೆ ಇಲ್ಲದ ಹಾಗೂ ನಕಲಿ ವಿಳಾಸ ಹೊಂದಿರುವ ಮತದಾರರ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಕ್ಕೆ, 32 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ಪ್ರಕಾಶ್ ಖಂಡ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನಡೆಯಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಮತದಾರರ ಪಟ್ಟಿಯಲ್ಲಿ ಹಲವು ಮತದಾರರ ಮನೆ ನಂಬರ್ ''''''''''''''''00'''''''''''''''' ಎಂದು ನಮೂದಾಗಿದೆ. ಕೋವಿಡ್ ಅವಧಿಯಲ್ಲಿ ಮೃತಪಟ್ಟವರ ಹಾಗೂ ಭಾಲ್ಕಿ ಬಿಟ್ಟು ಬೇರೆಡೆಗೆ ವಲಸೆ ಹೋದವರ ಹೆಸರುಗಳು ಇಂದಿಗೂ ಪಟ್ಟಿಯಲ್ಲೇ ಇವೆ. ಇಂತಹ ಹೆಸರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನಾವು ಫಾರ್ಮ್ ನಂಬರ್ 7ರ ಮೂಲಕ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ. ಅರ್ಹ ಹಕ್ಕನ್ನು ಚಲಾಯಿಸಿದ್ದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ಕೇಸ್ ಹಾಕಿರುವುದು ಖಂಡನೀಯ ಎಂದರು.
ನಾವು ನೀಡಿದ ಅರ್ಜಿಯನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಬೇಕಿತ್ತು. ಆದರೆ ಕಾಂಗ್ರೆಸ್‌ನವರು ತಾವೇ ಮುಂದೆ ನಿಂತು, ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಮುನ್ನೆಲೆಗೆ ತಂದು ನಮ್ಮ 32 ಬೆಂಬಲಿಗರ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ಶೇ.65ರಷ್ಟು ಮಾತ್ರ ಮತದಾನವಾಗುತ್ತಿದೆ. ಉಳಿದ ಶೇ.35ರಷ್ಟು ಮತದಾರರು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‌ನವರು ನಕಲಿ (ಬೋಗಸ್) ಮತಗಳನ್ನು ಸೃಷ್ಟಿಸಿಕೊಂಡು ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಅವರ ಶಿಕ್ಷಣ ಸಂಸ್ಥೆಗಳ ಕಾಲೇಜುಗಳ ಹೆಸರಲ್ಲೇ ಸಾವಿರಾರು ನಕಲಿ ಓಟರ್ ಐಡಿಗಳನ್ನು ಮಾಡಿಸಲಾಗಿದ್ದು, ಈ ಎಲ್ಲಾ ಅಕ್ರಮಗಳ ಬಗ್ಗೆ ಸಮಗ್ರ ಪರಿಷ್ಕರಣೆಯಾಗಬೇಕು ಎಂದು ಒತ್ತಾಯಿಸಿದರು. ನಾವು ಯಾರದ್ದೇ ಅರ್ಹ ಮತಗಳನ್ನು ತೆಗೆದುಹಾಕಲು ಹೇಳುತ್ತಿಲ್ಲ. ಪ್ರತಿಯೊಬ್ಬ ನಿಜವಾದ ಪ್ರಜೆಗೆ ಮಾತ್ರ ಮತದಾನದ ಹಕ್ಕಿರಬೇಕು ಎನ್ನುವುದೇ ನಮ್ಮ ಆಶಯ ವಾಗಿದೆ. ಮುಸ್ಲಿಂ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಆ ಸಮುದಾಯದ ಅಭಿವೃದ್ಧಿಗೆ ಏನೂ ಮಾಡಿಲ್ಲ ಎಂದು ಪ್ರಕಾಶ್ ಖಂಡ್ರೆ ದೂರಿದರು.
