ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆ
ನಮ್ಮ ಹೋರಾಟದ ಹಕ್ಕನ್ನು ಕಸಿಯಲು, ನಮ್ಮ ಹೋರಾಟ ಹತ್ತಿಕ್ಕುವ ಸಲುವಾಗಿ ಈ ಸರ್ಕಾರ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಮೀಸಲಾತಿ ಹಕ್ಕು ಸಂರಕ್ಷಣಾ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ ಅಂಗಡಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಒಳ ಮೀಸಲಾತಿ ಜಾರಿಗೆ ಮುಂದಾಗಿದ್ದ ಬಿಜೆಪಿಯನ್ನು ಸೋಲಿಸಿದ್ದೆವು. ಆಗ ಬಹಳ ತೀವ್ರವಾದ ಹೋರಾಟ ಮಾಡಲಾಗಿತ್ತು. ಆದರೆ, ಆ ಸರ್ಕಾರ ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಆದರೆ, ಒಳ ಮೀಸಲಾತಿ ವಿರುದ್ಧ ಆ. 20ರಂದು ಹೊಸಪೇಟೆ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ನಮ್ಮ ಹೋರಾಟದ ಹಕ್ಕು ಹತ್ತಿಕ್ಕಲು ಈ ಸರ್ಕಾರ ಪ್ರಕರಣ ದಾಖಲಿಸಿದೆ. ಸಿಪಿಐ, ಡಿವೈಎಸ್ಪಿ ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ಈ ಪ್ರಕರಣ ಕೈಬಿಡಬೇಕು. ಒಂದು ವಾರದಲ್ಲಿ ಕ್ರಮಕೈಗೊಳ್ಳದಿದ್ದರೆ ಎಸ್ಪಿ ಕಚೇರಿ ಬಳಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಸರಿಯಾದ ದತ್ತಾಂಶ ಸಂಗ್ರಹಿಸದೆ ಅವೈಜ್ಞಾನಿಕ ವರದಿ ಮೂಲಕ ಅನ್ಯಾಯ ಮಾಡಿದೆ. ಇದೇ ಜಿಲ್ಲೆಯವರಾದ ಕೆಎಂಎಫ್ ಮಾಜಿ ಅಧ್ಯಕ್ಷ ಭೀಮಾ ನಾಯ್ಕ ಮತ್ತು ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಕೈಲಾಗದವರಾ? ನಾವು ಲೆಕ್ಕಕ್ಕೆ ಇಲ್ವಾ? ಬೋವಿ ಮತ್ತು ಬಂಜಾರ 60ರಿಂದ 70 ಕ್ಷೇತ್ರಗಳಲ್ಲಿ ನಿಮ್ಮ ಗೆಲುವಿಗೆ ಕಾರಣರಾಗಿದ್ದೇವೆ. ಮುಖ್ಯಮಂತ್ರಿ ನಮಗೆ ಅರ್ಧ ಗಂಟೆ ಸಮಯ ಕೊಡಲಿಲ್ಲ. ನಮ್ಮ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ಇದಕ್ಕೆ ಹೋರಾಟ ಮಾಡಿದರೆ ಪ್ರಕರಣ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬ್ರಿಟಿಷರಿಗೆ ಹೆದರದ ಬಂಜಾರ ಸಮುದಾಯ ನಿಮಗೆ ಹೆದರುವುದಿಲ್ಲ. ಇನ್ನೂ ಹತ್ತಾರು ಕೇಸ್ ಹಾಕಿ. ನಿಮ್ಮ ಮೇಲೆನೂ ಕೇಸ್ ಕೊಡ್ತೀವಿ, ನೀವು ದಾಖಲಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಯಾವುದೇ ಹೋರಾಟ ಮಾಡುವಂತಿಲ್ಲ ಎಂದು ಸುಗ್ರೀವಾಜ್ಞೆ ಹೊರಡಿಸಿ, ಇಲ್ಲ ಎಲ್ಲರಿಗೂ ಸಮನಾದ ಹಕ್ಕು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಗೋರ್ ಬಂಜಾರ ಮಳಾವ್ ಸಂಘಟನೆಯ ರಾಜ್ಯ ಸಂಚಾಲಕ ಎಸ್.ಪಿ. ಲಿಂಬ್ಯಾ ನಾಯ್ಕ, ಸುಶೀಲಾ ನಗರದ ತಿಪ್ಪೇಸ್ವಾಮಿ ಮಹಾರಾಜ್ ಮಾತನಾಡಿದರು.ಬಂಜಾರ ಸಮುದಾಯದ ಶಿವಕುಮಾರ, ಅಲೋಕ್ ನಾಯ್ಕ, ಹನುಮಾನಾಯ್ಕ, ಕುಮಾರ, ಗೋವಿಂದನಾಯ್ಕ ಮತ್ತಿತರರಿದ್ದರು.