ಕಾಂಗ್ರೆಸ್ ಮಾಡಿದ್ದು ಪ್ರತಿಭಟನೆಯಲ್ಲ, ಸಂಭ್ರಮಾಚರಣೆ: ಬೋಪಯ್ಯ ಕಿಡಿ

| Published : Apr 08 2025, 12:36 AM IST

ಸಾರಾಂಶ

ಮಡಿಕೇರಿಯಲ್ಲಿ ಕಾಂಗ್ರೆಸ್‌ ಮಾಡಿದ್ದು ಪ್ರತಿಭಟನೆ ಅಲ್ಲ, ಎಲ್ಲ ಕಾಂಗ್ರೆಸಿಗರ ಸಂಭ್ರಮಾಚರಣೆ ಎಂದು ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ ಲೇವಡಿ ಮಾಡಿದರು. ವಿನಯ್‌ ಸೋಮಯ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯಲ್ಲಿ ಕಾಂಗ್ರೆಸ್‌ ಮಾಡಿದ್ದು ಪ್ರತಿಭಟನೆ ಅಲ್ಲ, ಎಲ್ಲ ಕಾಂಗ್ರೆಸ್ಸಿಗರ ಸಂಭ್ರಮಾಚರಣೆ ಎಂದು ಲೇವಡಿ ಮಾಡಿದ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ, ವಿನಯ್ ಸೋಮಯ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿಲ್ಲ, ಬದಲಾಗಿ ಇದು ಕಾರ್ಯಕರ್ತರ ಸಂಭ್ರಮಾಚರಣೆ. ಅನ್ಯಾಯ ಆದಾಗ ಪ್ರಶ್ನಿಸುವ, ಖಂಡಿಸುವ ಹಕ್ಕು ಎಲ್ಲರಿಗೂ ಇದೆ. ಜನಪ್ರತಿನಿಧಿ ಹೊಗಳಿಕೆಗೆ ಮಾತ್ರ ಸೀಮಿತನಾ? ಟೀಕೆಯನ್ನು ಕ್ರೀಡಾತ್ಮಕವಾಗಿ ತೆಗೆದುಕೊಳ್ಳಬೇಕು‌ ಎಂದು ಹೇಳಿದರು.

ನಾನು ಪೊಲೀಸರಿಗೆ ಕರೆ ಮಾಡಿ ಒತ್ತಡ ಹೇರಿದ್ದೇನೆ ಎಂದು ಶಾಸಕರು ಹೇಳಿದ್ದಾರೆ. ಪೊಲೀಸ್‌ಗೆ ಕರೆ ಮಾಡಿ ಕೇಳುವ ಹಕ್ಕು ಎಲ್ಲ ನಾಗರಿಕರಿಗೆ ಇದೆ. ಕಾಂಗ್ರೆಸ್ ಶಾಸಕರು, ಸಚಿವರು ಎಲ್ಲ ಕಡೆಯಿಂದ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ನಾನು ಡಿಸಿಪಿಗೆ ಕರೆ ಮಾಡಿದ್ದು ನಿಜ. ನನ್ನ ಪ್ರಶ್ನೆಗೆ ಡಿಸಿಪಿ ಬಳಿ ಉತ್ತರ ಇರಲಿಲ್ಲ. ಪ್ರಕರಣ ದಾಖಲು ಮಾಡುವಂತೆ ಹೇಳಿದ್ದು ನಿಜ. ಯುಡಿಆರ್ ಹಾಕಿ ಬಿಸಾಕಿ ಎಂದು ಸಚಿವರು, ಶಾಸಕರು ಹೇಳಿದ್ದಾರಂತೆ. ಇದನ್ನು ನೋಡಿ ಸುಮ್ಮನೆ ಕೈಕಟ್ಟಿ ಕೂರಬೇಕಾ‌? ಎಂದು ಶಾಸಕ ಪೊನ್ನಣ್ಣ ಅವರ ವಿರುದ್ಧ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ವಿರಾಜಪೇಟೆಯಲ್ಲಿ ಶಾಸಕರ ಪ್ರತಿಕೃತಿ ದಹನ ಮಾಡಿದಾಗ ಪೊಲೀಸರು ಸೂಮೋಟೊ ಕೇಸ್ ಹಾಕಿದ್ದರು. ಪ್ರತಿಕೃತಿ ದಹನದಿಂದ ರಸ್ತೆ ಹಾಳಾಯಿತು ಎಂದು ಬೊಬ್ಬೆ ಹೊಡೆದರು. ವಿರಾಜಪೇಟೆ ಪಟ್ಟಣದ ರಸ್ತೆ ಪರಿಸ್ಥಿತಿ ಹೇಗಿದೆ ಎಂದು ಒಮ್ಮೆ ನೋಡಿ ಎಂದ ಬೋಪಯ್ಯ, ಪ್ರತಾಪ್ ಸಿಂಹ ಪ್ರತಿಕೃತಿ ದಹನ ಮಾಡಿದಾಗ ಯಾವುದೇ ಕೇಸ್ ಇಲ್ಲ. ಇದು ಯಾವ ಪಾರದರ್ಶಕ ಆಡಳಿತ ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿನಯ್ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದೇವೆ. ಮುಂದೆ ಇನ್ನಷ್ಟು ಸಹಾಯ ಮಾಡುತ್ತೇವೆ. ಕಾಂಗ್ರೆಸ್‌ನವರನ್ನು ಕೇಳಿ‌ ನಾವು ಸಹಾಯ ಮಾಡಬೇಕಾಗಿಲ್ಲ. ನಾವು ದೇವರಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಕಾವೇರಿ ಮಾತೆ ಭೂಮಿಯಲ್ಲಿ ಇದೆಲ್ಲ ನಡೆಯಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತೆ. ತಾಕತ್ತಿದ್ದರೆ ಪ್ರಕರಣವನ್ನು ಸಿಬಿಐಗೆ ನೀಡಿ ಎಂದು ಬೋಪಯ್ಯ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಏನೂ ತಪ್ಪು ಮಾಡದ ಅಮಾಯಕ ವಿನಯ್ ಸೋಮಯ್ಯ ಆತ್ಮಹತ್ಯೆಯಾಗಿದೆ. ಸಾಮಾನ್ಯ ಜನರಿಗೆ ಅನ್ವಯವಾಗುವಂತೆ ಇವರಿಗೂ ಅನ್ವಯವಾಗಲಿ. ಸರ್ಕಾರವೇ ಇವರ ಪರವಾಗಿ ನಿಂತಿದೆ. ಶಾಸಕರ ವಿರುದ್ಧ ಮೊಕದ್ದಮೆ ದಾಖಲಾಗದಿದ್ದರೆ ಹೋರಾಟ ಮುಂದುವರಿಸಲಾಗುತ್ತದೆ. ಆದರೆ ಸರ್ಕಾರದ ಅಧೀನದಲ್ಲಿ ಇರುವ ಸಂಸ್ಥೆಗೆ ಒಪ್ಪಿಸಿದರೆ ಎಷ್ಟರ ಮಟ್ಟಿಗೆ ತನಿಖೆ ನಡೆಯಬಹುದು ಎಂದು ಪ್ರಶ್ನಿಸಿದರು.

ಮಡಿಕೇರಿಯಲ್ಲಿ ಏ.9ಕ್ಕೆ ಪ್ರತಿಭಟನೆ ನಡೆಯಲಿದೆ. ಚೌಡೇಶ್ವರಿ ದೇವಾಲಯದಿಂದ ಹಳೆಯ ಖಾಸಗಿ ಬಸ್ ನಿಲ್ದಾಣ ತನಕ ಪಾದಯಾತ್ರೆ ನಡೆಯಲಿದೆ. ಅಲ್ಲಿ ಪ್ರತಿಭಟನಾ ಸಭೆ ಆಗಲಿದೆ. ಪ್ರತಿಭಟನೆಗೆ ರಾಜ್ಯದ ಪ್ರಮುಖರು ಆಗಮಿಸಲಿದ್ದಾರೆ. ವಿನಯ್ ಸೋಮಯ್ಯ ಸಾವಿಗೆ ಕಾಂಗ್ರೆಸ್ ಕಾರಣ. ಜೀವಂತ ಇರುವಾಗಲೇ ಸಾಯಲು ಪ್ರಚೋದನೆ ಕೊಡುವ ಕೆಲಸ ಕಾಂಗ್ರೆಸ್ ಮಾಡಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಪ್ರಮುಖರಾದ ಅರುಣ್ ಕುಮಾರ್, ಸಜಿಲ್ ಕೃಷ್ಣ, ತಳೂರು ಕಿಶೋರ್ ಕುಮಾರ್ ಇದ್ದರು.