ಸಾರಾಂಶ
ಗಂಗಾವತಿ: ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜ.29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರ ಹರಿದು ಹಾಕಿರುವುದನ್ನು ಖಂಡಿಸಿ ಇಲ್ಲಿಯ ಹಾಲುಮತ ಸಮಾಜದಿಂದ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕನಕದಾಸ ತಾಲೂಕು ಕುರುಬರ ಸಂಘದ ಅಧ್ಯಕ್ಷ ಯಮನಪ್ಪ ವಿಠಲಾಪುರ, ವಿದ್ಯಾರ್ಥಿನಿಲಯದ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಜ.28ರಂದು ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಸಮಾವೇಶವು ಯಶಸ್ವಿಯಾಗಿರುವುದನ್ನು ಸಹಿಸಲಾಗದೇ ಅಸೂಯೆಯಿಂದ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಇಂತಹ ಹೀನ ಕೃತ್ಯ ಮಾಡಲಾಗಿದೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯ ಕೆಲ ಮುಖಂಡರು ಹಿಂದೂ ಧರ್ಮವನ್ನು ಗುತ್ತಿಗೆಗೆ ತೆಗೆದುಕೊಂಡ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಾಡಿನಲ್ಲಿ ಭಯ ಮತ್ತು ದಬ್ಬಾಳಿಕೆ ವಾತಾವರಣ ಸೃಷ್ಟಿಸಲು ಹೊರಟಿರುತ್ತಾರೆ ಎಂದು ದೂರಿದರು.ದಬ್ಬಾಳಿಕೆ, ನೀಚ ಕೃತ್ಯಗಳನ್ನು ಸಮರ್ಥವಾಗಿ ಎದುರಿಸಲು ರಾಜ್ಯದಲ್ಲಿರುವ ಕುರುಬ ಸಮಾಜವು ಶಕ್ತಿಯತವಾಗಿದೆ. ಸಮಾಜದ ಸಹನೆ, ತಾಳ್ಮೆ ಪರಿಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ಕೃತ್ಯವನ್ನು ಎಸಗಿದ ಸಮಾಜ ಘಾತಕರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಎಚ್ಚರಿಕೆಯ ಕ್ರಮ ಕೈಗೊಳಬೇಕೆಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕನಕದಾಸ ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷ ಯಮನಪ್ಪ ನವಲಿ, ಗಂಗಾವತಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ವೆಂಕಟೇಶ ಬಿ., ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಅಧ್ಯಕ್ಷ ಬೆಟ್ಟಪ್ಪ ಹುರಕಡ್ಲಿ, ಬೀರಲಿಂಗೇಶ್ವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ನಾಗೇಶಪ್ಪ, ಹಾಲುಮತ ಮಹಾಸಭಾ ಗಂಗಾವತಿ ಅಧ್ಯಕ್ಷ ರಾಮಕೃಷ್ಣ ಎಸ್.ಟಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.