ರಾಮನಗರ: ತಾಲೂಕಿನ ಬಿಡದಿ ಹೋಬಳಿಯಲ್ಲಿ ತಲೆ ಎತ್ತಲಿರುವ ಬಿಡದಿ ಟೌನ್‌ಶಿಪ್‌ ಯೋಜನಾ ಪ್ರದೇಶದ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಧಿಕಾರಿಗಳ ಡಿಜಿಟಲ್ ಸಹಿ ನಕಲು ಮಾಡಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ವಂಚಿಸಲು ಮುಂದಾಗಿರುವ ಪ್ರಕರಣದ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ

ರಾಮನಗರ: ತಾಲೂಕಿನ ಬಿಡದಿ ಹೋಬಳಿಯಲ್ಲಿ ತಲೆ ಎತ್ತಲಿರುವ ಬಿಡದಿ ಟೌನ್‌ಶಿಪ್‌ ಯೋಜನಾ ಪ್ರದೇಶದ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಧಿಕಾರಿಗಳ ಡಿಜಿಟಲ್ ಸಹಿ ನಕಲು ಮಾಡಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ವಂಚಿಸಲು ಮುಂದಾಗಿರುವ ಪ್ರಕರಣದ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೊಟ್ಟೈ ತಾಲೂಕಿನ ಥಳ್ಳಿ ಪಟ್ಟಣದ ರವಿಕುಮಾರ್, ಲಕ್ಷ್ಮಿನಾರಾಯಣ ಹಾಗೂ 2ನೇ ಪ್ರಕರಣದಲ್ಲಿ ‌ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ಮೋಹನ್, ಸುರೇಶ್‌ನನ್ನು ಪೊಲೀಸರು ಬಂಧಿಸಿದ್ದರು.

ಇದೀಗ ಪೊಲೀಸರು ಬಿಡದಿ ಹೋಬಳಿ ಮನಗನಹಳ್ಳಿಯ ಜೆ.ಶಿವಕುಮಾರ್, ಅರಳಾಳುಸಂದ್ರದ ಎ.ಎಂ.ನಾಗರಾಜು, ಮೆರವೇಗೌಡನದೊಡ್ಡಿ ರಮೇಶ, ಮಾಗಡಿ ಶ್ರೀಶಂಕರ ಪ್ರಿಂಟರ್ಸ್ ಮಾಲೀಕ ವೇಣು ರಂಗನಾಥ, ನೆಲಮಂಗಲ ತಾಲೂಕಿನ ಗೊಟ್ಟಿಗೆರಯ ಆರ್.ತರುಣ್, ಗಂಟೆಹೊಸಹಳ್ಳಿ ಶಿವಕುಮಾರ್, ನಕಲಿ ಸರ್ಕಾರಿ ಸೀಲುಗಳನ್ನು ಮಾಡಿಕೊಟ್ಟ ತುಮಕೂರು ಜಿಲ್ಲೆ ಪಾವಗಡದ ಎಚ್.ಬಿ.ಕೀರ್ತಿ ರಾಜ್, ಗೂಳೂರು ಹೋಬಳಿ ಬಸವೇಗೌಡನಪಾಳ್ಯದ ಬಿ.ಎನ್.ಮಂಜುನಾಥನನ್ನು ಬಂಧಿಸಿದ್ದಾರೆ.

ಯೋಜನಾ ಪ್ರದೇಶದ ವ್ಯಾಪ್ತಿಯ ಅರಳಾಳುಸಂದ್ರದ ಸರ್ವೆ ನಂ. 25/5ರಲ್ಲಿನ 1.13 ಎಕರೆ, ಸರ್ವೆ ನಂ. 43/1ರಲ್ಲಿನ 1.2 ಎಕರೆ ಮತ್ತು ಸರ್ವೆ ನಂ. 117/2ರಲ್ಲಿನ 1.25 ಎಕರೆ ಜಮೀನಿಗೆ ಆರೋಪಿಗಳು ನಕಲಿ ದಾಖಲೆಗಳು ಮತ್ತು ನಕಲಿ ಮಾಲೀಕರನ್ನು ಸೃಷ್ಟಿಸಿದ್ದರು. ಮೊದಲ ಪ್ರಕರಣದ ಆರೋಪಿಗಳಾದ ರವಿಕುಮಾರ್, ಲಕ್ಷ್ಮಿನಾರಾಯಣ ಇಬ್ಬರೂ ಶಂಕರ್ ರೆಡ್ಡಿ, ಕೃಷ್ಣಾರೆಡ್ಡಿ ಹೆಸರಿನಲ್ಲಿ ದಾಖಲೆ ಸೃಷ್ಟಿಸಿದ್ದರು. ಮತ್ತೊಂದು ಪ್ರಕರಣದ ಆರೋಪಿಗಳಾದ ಮೋಹನ್, ಸುರೇಶ್ ಇಬ್ಬರೂ ವೆಂಕಟೇಶ್ ಎಚ್. ಹಾಗೂ ರಾಜಶೇಖರ್ ಎಚ್. ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಪರಿಹಾರಕ್ಕೆ ಅರ್ಜಿ ಕೊಟ್ಟಿದ್ದರು.

ದಾಖಲೆಗಳನ್ನು ಪರಿಶೀಲಿಸುವಾಗ ಮೇಲ್ನೋಟಕ್ಕೆ ನಕಲಿ ಎಂದು ಕಂಡುಬಂದಿದ್ದವು. ಈ ಕುರಿತು ರಾಮನಗರ ತಹಸೀಲ್ದಾರ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಂದ ದಾಖಲೆಗಳ ಕುರಿತು ಸ್ಪಷ್ಟೀಕರಣ ಕೋರಿದಾಗ, ಅವು ನಕಲಿ ಎಂಬುದು ಗೊತ್ತಾಗಿತ್ತು. ಬಳಿಕ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ವಿಶೇಷ ಭೂ ಸ್ವಾಧೀನಾಧಿಕಾರಿ - 2 ಕಿಶನ್ ಕಲಾಲ್ ಬಿಡದಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ನಕಲಿ ದಾಖಲೆ ಸೃಷ್ಟಿಯನ್ನೇ ದಂಧೆ ಮಾಡಿಕೊಂಡಿರುವ ಆರೋಪಿಗಳ ವಿರುದ್ದ ದಾಬಸ್‌ಪೇಟೆ, ನೆಲಮಂಗಲ ಸೇರಿದಂತೆ ಕೆಲ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ. ಸರ್ಕಾರಿ ಯೋಜನೆಗಳಿಗೆ ಭೂ ಸ್ವಾಧೀನ ನಡೆಯುವ ಸ್ಥಳಗಳ ಸರ್ವೇ ನಂಬರ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸುವುದನ್ನೇ ಚಾಳಿ ಮಾಡಿಕೊಂಡಿದ್ದರು. ಇದೊಂದು ಜಾಲದಂತೆ ಕಂಡುಬಂದಿದ್ದು, ಪ್ರಕರಣವನ್ನು ಎಲ್ಲಾ ಆಯಾಮದಿಂದಲೂ ಪೊಲೀಸರು ತನಿಖೆ ನಡೆಸಿದರು.

ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಕರಣದ ಸೂತ್ರಧಾರ ಆರ್.ತರುಣ್ ಸೇರಿ ಒಟ್ಟು 12 ಮಂದಿಯನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿರುವ ಕಂಪ್ಯೂಟರ್ ಉಪಕರಣಗಳು, ನಕಲಿ ಸೀಲುಗಳು, ನಕಲಿ ದಾಖಲಾತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ಪಿ ರೋಹನ್ ಜಗದೀಶ್ ಮತ್ತು ಎಎಸ್ಪಿ ರಾಜೇಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಎಸ್.ಶ್ರೀನಿವಾಸ್ ನೇತೃತ್ವದಲ್ಲಿ ಬಿಡದಿ ಠಾಣೆಯ ಪೊಲೀಸ್ ನಿರೀಕ್ಷಕ ಆರ್.ವಿಜಯಕುಮಾರ್‌, ಪಿಎಸ್ಐ ಅಣ್ಣಯ್ಯ, ಮುಖ್ಯ ಪೇದೆಗಳಾದ ಮಂಜುನಾಥ, ಶ್ರೀನಿವಾಸ, ಅರುಣ್ ಕುಮಾರ್ , ಪೇದೆಗಳಾದ ನಂದೀಶ್ ಕುಮಾರ್ ,ಮಂಜುನಾಥ್, ಕೆಂಪಣ್ಣಸ್ವಾಮಿ, ಶಶಿಧರ್ , ಗಂಗಾಧರ್ , ತಾಂತ್ರಿಕ ವಿಭಾಗ ಸಿಬ್ಬಂದಿ ಮಹದೇವ ಪಾಲ್ಗೊಂಡಿದ್ದರು.

29ಕೆಆರ್ ಎಂಎನ್ 7,8,9,10,11,12,13.ಜೆಪಿಜಿ

ನಕಲಿ ಭೂ ದಾಖಲೆ ಸೃಷ್ಟಿಸಿದ ಬಂಧಿತರು.