ಮಾಜಾಳಿಯ ಸಂದೀಪ ವರ್ಣೇಕರ ಅವರಿಗೆ ಸೇರಿದ ಅಂಗಡಿಯಲ್ಲಿ ಇಕ್ಬಾಲ್ ಎಂಬವರು ಬಾಡಿಗೆಗೆ ಸಲೂನ್ ನಡೆಸುತ್ತಿದ್ದರು. ಈ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಶಾದ್, ಕೂದಲು ಕತ್ತರಿಸಿಕೊಳ್ಳಲು ಅಂಗಡಿಗೆ ಬಂದಿದ್ದ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಕಾರವಾರ: ತಾಲೂಕಿನ ಮಾಜಾಳಿ ಸಮೀಪ 10 ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಆರೋಪಿ ಸಂಶಾದ್‌ನನ್ನು ಪೊಲೀಸರು ಮಹಾರಾಷ್ಟ್ರದ ಮುಂಬೈನ ಶಿವಾಜಿನಗರದಲ್ಲಿ ಬಂಧಿಸಿದ್ದಾರೆ.ಮಾಜಾಳಿಯ ಸಂದೀಪ ವರ್ಣೇಕರ ಅವರಿಗೆ ಸೇರಿದ ಅಂಗಡಿಯಲ್ಲಿ ಇಕ್ಬಾಲ್ ಎಂಬವರು ಬಾಡಿಗೆಗೆ ಸಲೂನ್ ನಡೆಸುತ್ತಿದ್ದರು. ಈ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಶಾದ್, ಕೂದಲು ಕತ್ತರಿಸಿಕೊಳ್ಳಲು ಅಂಗಡಿಗೆ ಬಂದಿದ್ದ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.ಘಟನೆ ನಡೆದ ಸಂದರ್ಭದಲ್ಲಿ ಬಾಲಕಿ ಜೋರಾಗಿ ಕೂಗಿಕೊಂಡಿದ್ದು, ಆಕೆಯ ಅಕ್ಕ ಸ್ಥಳಕ್ಕೆ ಧಾವಿಸಿದ್ದಳು. ಬಳಿಕ ತಾಯಿ ಹಾಗೂ ಅಕ್ಕ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಸಂಶಾದ್ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.ನಿರಂತರ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುಂಬೈ ಶಿವಾಜಿನಗರದಲ್ಲಿ ಅಡಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆರೋಪಿಯನ್ನು ಕಾರವಾರಕ್ಕೆ ಕರೆತಂದಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ತನಿಖೆ ಮುಂದುವರಿಸಿದ್ದಾರೆ.ಬಾಲಕಿಯ ಮೇಲಿನ ದೌರ್ಜನ್ಯದ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆಗಳು ಹಾಗೂ ಸಾರ್ವಜನಿಕರು ಚಿತ್ತಾಕುಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.ಅಪರಾಧ ತಡೆಗೆ ಹೊರರಾಜ್ಯ ಕಾರ್ಮಿಕರ ಮಾಹಿತಿ ಕಡ್ಡಾಯವಾಗಿ ಸಂಗ್ರಹಿಸಲು ಆಗ್ರಹ

ಕಾರವಾರ: ತಾಲೂಕಿನ ಚಿತ್ತಾಕುಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾದ ಕಾರವಾರ ಪೊಲೀಸರ ಕಾರ್ಯಾಚರಣೆಗೆ ಯುವ ಕಾಂಗ್ರೆಸ್ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಆರೋಪಿಯ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ ಪಿಎಸ್ಐ ಪರಶುರಾಮ್ ಹಾಗೂ ಪೊಲೀಸ್ ತಂಡವನ್ನು ಅಭಿನಂದಿಸಿರುವ ಅವರು, ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲೆಯಲ್ಲಿ ಉದ್ಯೋಗದಲ್ಲಿರುವ ಹೊರರಾಜ್ಯದ ಕಾರ್ಮಿಕರ ಸಮಗ್ರ ಮಾಹಿತಿ ಸಂಗ್ರಹಿಸಲು ಪೊಲೀಸ್ ಇಲಾಖೆ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಈ ಕುರಿತು ಯುವ ಕಾಂಗ್ರೆಸ್ ಮುಖಂಡರಾದ ನೂತನ ಜೈನ್, ದರ್ಶನ್ ನಾಯ್ಕ್, ನಾಗರಾಜ್ ಗೌಡ, ಅಭಿ ಬಾಡ್ಕರ್, ನಾಗರಾಜ್ ಅಮದಳ್ಳಿ, ಸಂತೋಷ್ ನಾಯ್ಕ್ ಹಾಗೂ ಅಭಿಷೇಕ್ ರಾಣೆ ಜಂಟಿ ಹೇಳಿಕೆ ನೀಡಿದ್ದಾರೆ.ಕಾರವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಲೂನ್‌ಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳು, ಅಂಗಡಿಗಳು ಹಾಗೂ ಇತರೆ ಉದ್ಯೋಗ ಕ್ಷೇತ್ರಗಳಲ್ಲಿ ಹೊರರಾಜ್ಯಗಳಿಂದ ಆಗಮಿಸಿರುವ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರ ಹೆಸರು, ಗುರುತಿನ ದಾಖಲೆ, ಸ್ವಂತ ಊರು, ಶಾಶ್ವತ ವಿಳಾಸ, ಪ್ರಸ್ತುತ ವಾಸಸ್ಥಳ ಹಾಗೂ ಉದ್ಯೋಗದ ವಿವರಗಳನ್ನು ಸಂಬಂಧಪಟ್ಟ ಮಾಲೀಕರು ಮತ್ತು ಗುತ್ತಿಗೆದಾರರ ಮೂಲಕ ಪೊಲೀಸ್ ಇಲಾಖೆ ಅಧಿಕೃತವಾಗಿ ದಾಖಲಿಸಿಕೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.