ಮಧ್ಯಸ್ಥಿಕೆದಾರರಿಂದ ಪ್ರಕರಣ ಇತ್ಯರ್ಥ ಅತ್ಯುತ್ತಮ ಕಾರ್ಯ: ನ್ಯಾ. ರಾಜೇಶ್ವರಿ ಹೆಗಡೆ

| Published : Aug 24 2024, 01:24 AM IST

ಮಧ್ಯಸ್ಥಿಕೆದಾರರಿಂದ ಪ್ರಕರಣ ಇತ್ಯರ್ಥ ಅತ್ಯುತ್ತಮ ಕಾರ್ಯ: ನ್ಯಾ. ರಾಜೇಶ್ವರಿ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ದಿನಗಳಲ್ಲಿ ಮಧ್ಯಸ್ಥಿಕೆದಾರರ ಭಾಗವಹಿಸಿಕೆ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಣಗೆರೆ, ಹಾವೇರಿ, ಚಿತ್ರದುರ್ಗದ ವಕೀಲ ಸಂಧಾನಕಾರರಿಗೆ ಪುನರ್ಮನನ ಕಾರ್ಯಾಗಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಇಂದಿನ ದಿನಗಳಲ್ಲಿ ಮಧ್ಯಸ್ಥಿಕೆದಾರರ ಭಾಗವಹಿಸಿಕೆ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಅತ್ಯುತ್ತಮ ಕಾರ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಬೆಂಗಳೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗದ ವಕೀಲ ಸಂಧಾನಕಾರರಿಗೆ ಏರ್ಪಡಿಸಲಾದ ಎರಡು ದಿನಗಳ ಪುನರ್ಮನನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ಯಸ್ಥಿಕದಾರರು ನ್ಯಾಯ ಕೋರಿ ಬಂದ ಪಕ್ಷಕಾರರಿಗೆ ಕಾನೂನು ಮಾಹಿತಿ ನೀಡುವುದಷ್ಟೆ ಅಲ್ಲದೇ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ತಿಳಿಸಿ ಕೊಡುವುದರಿಂದ ಪಕ್ಷಕಾರರಿಗೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ನಿರ್ವಹಿಸುವ ಕಾರ್ಯಗಳ ಮೂಲಕ ಅನುಕೂಲವಾಗುತ್ತದೆ. ಮಧ್ಯಸ್ಥಿಕೆದಾರರ ಈ ರೀತಿಯ ಕಾರ್ಯಗಳು ನಿಜವಾಗಲೂ ಶ್ಲಾಘನೀಯ. ಮಧ್ಯಸ್ಥಿಕೆದಾರರಿಂದ ವ್ಯಾಜ್ಯಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್‌ ಮಾತನಾಡಿ, ಇಂದಿನ ದಿನಗಳಲ್ಲಿ ಜನರಿಗೆ ಕಾನೂನು ಮಾಹಿತಿ ನೀಡುವುದು ಅತ್ಯವಶ್ಯಕವಾಗಿದೆ. ಆದ್ದರಿಂದ ವಕೀಲರು ಮತ್ತು ಸಂಧಾನಕಾರರ ಪಾತ್ರ ಬಹುಮುಖ್ಯವಾಗಿದೆ. ಮಧ್ಯಸ್ಥಿಕೆಯು ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲಕರವಾಗಿದೆ. ಕಡಿಮೆ ಖರ್ಚು ಮತ್ತು ಸಮಯ ಉಳಿತಾಯದ ಮಾರ್ಗವಾಗಿದೆ. ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಇದು ಉತ್ತಮ ಸಾಧನವಾಗಿದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮತ್ತು ಸಂಧಾನಕಾರ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಮಧ್ಯಸ್ಥಿಕೆಯ ಮೂಲಕ ವ್ಯಾಜ್ಯಗಳು ಬಗೆಹರಿದಲ್ಲಿ ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತರಬೇತಿದಾರರಾದ ಶೋಭಾ ಪಾಟೀಲ್, ಲತಾ ಪ್ರಸಾದ್, ಟಿ.ಎಂ. ಅನ್ನಪೂರ್ಣ ಉಪಸ್ಥಿತರಿದ್ದರು.

- - - -19ಕೆಡಿವಿಜಿ33ಃ:

ದಾವಣಗೆರೆಯಲ್ಲಿ ನಡೆದ ಸಂಧಾನಕಾರರ ತರಬೇತಿ ಕಾರ್ಯಾಗಾರವನ್ನು ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಉದ್ಘಾಟಿಸಿ ಮಾತನಾಡಿದರು.