ವಿಶ್ವ ಆರೋಗ್ಯ ಸಂಸ್ಥೆ ಗಮನ ಸೆಳೆದ ಪ್ರಕರಣಗಳು !

| Published : Sep 06 2025, 01:00 AM IST

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳ ಅವೈಜ್ಞಾನಿಕ ಚಟುವಟಿಕೆಗಳಿಂದಾಗಿ ಆ ಭಾಗದ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು, ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ನೇರ ದೂರು ಸಲ್ಲಿಕೆಯಾಗಿದೆ.

ಆನಂದ್ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ಕಂಪನಿಗಳ ಅವೈಜ್ಞಾನಿಕ ಚಟುವಟಿಕೆಗಳಿಂದಾಗಿ ಆ ಭಾಗದ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು, ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ನೇರ ದೂರು ಸಲ್ಲಿಕೆಯಾಗಿದೆ.

ಕಾನೂನು ಹೋರಾಟದ ಜೊತೆ ಜೊತೆಗೆ, ಷರತ್ತು ಉಲ್ಲಂಘಿಸಿ ಚಟುವಟಿಕೆಗಳಿಗಿಳಿದಿರುವ ಕೆಮಿಕಲ್‌ ಕಂಪನಿಗಳ ಜನ-ಜಲ ಜೀವನದ ಮೇಲೆ ಅವ್ಯಾಹತವಾಗಿ ನಡೆಸುತ್ತಿರುವ ಕೃತ್ಯಗಳಿಂದಾಗಿ ಜೀವಹಾನಿ, ಸಾವು-ನೋವುಗಳ ಕುರಿತು ದಾಖಲೆಗಳ ಸಮೇತ ವಿಶ್ವ ಆರೋಗ್ಯ ಸಂಸ್ಥೆ ಭಾರತೀಯ ವಿಭಾಗದಲ್ಲಿ ಕಡೇಚೂರು ಪ್ರಕರಣಗಳು ಗಮನ ಸೆಳೆದಿದೆ.

ಕನ್ನಡಪ್ರಭ ಸರಣಿ ವರದಿಗಳ ಆಧರಿಸಿ ಹಾಗೂ ಈ ಭಾಗದ ಜನರ ಜೀವನ ಕುರಿತ ದಾಖಲೆಗಳ ಸಮೇತ ಸಾರ್ವಜನಿಕ ದೂರು ಸಲ್ಲಿಕೆಯಾಗಿದೆ. ಫಾರ್ಮಾ ಕಂಪನಿಗಳಿಂದಾಗುತ್ತಿರುವ ಅಡ್ಡಪರಿಣಾಮಗಳ ಬಗ್ಗೆ, ಈ ಭಾಗದ ಜನಜೀವನ ಪ್ರತ್ಯೇಕ ಅಧ್ಯಯನ ಮುಂತಾದ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯರ ಮೂಲಕ ಗಮನ ಸೆಳೆದಿವೆ.

ಕೇಂದ್ರ ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಗೆ ಸುಳ್ಳು ದಾಖಲಾತಿಗಳನ್ನು ಸಲ್ಲಿಸಿ, ಬೇರೆ ಬೇರೆ ಭಾಗದಲ್ಲಿ ಕಂಪನಿಗಳು ತಾಂತ್ರಿಕ ವರದಿಗಳನ್ನು (ಪ್ರೊಜೆಕ್ಟ್‌ ರಿಪೋರ್ಟ್‌) ನಕಲು ಮಾಡಿದ್ದಲ್ಲದೆ, ಪರಿಸರ ಅನುಮತಿ ಪಡೆಯಲಿಕ್ಕೆಂದೇ ಸ್ಥಳೀಯ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿಯೇ ಗೌಪ್ಯವಾಗಿಟ್ಟುಕೊಂಡು ಕಾರ್ಖಾನೆ ಆರಂಭಕ್ಕೆ ಅನುಮತಿ ಪಡೆದ ಬಗ್ಗೆ ದಾಖಲೆಗಳು ಕೇಂದ್ರ ಇಲಾಖೆಯ ಗಮನಕ್ಕೂ ತರಲಾಗಿದ್ದು, ಹಸಿರು ಪೀಠದ ಮೂಲಕ ಕಾನೂನು ಹೋರಾಟದಲ್ಲಿ ಕಂಪನಿಗಳ ಮೋಸ ಬಯಲಾಗಲಿದೆ ಎಂದು ಸಂಡೂರಿನ ಸಾಮಾಜಿಕ ಕಾರ್ಯಕರ್ತ ಶ್ರೀಶೈಲ ಆಲದಹಳ್ಳಿ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಜನಜಾಗೃತಿಗೆ ಕಾರಣವಾದ "ಕನ್ನಡಪ್ರಭ "ದ 150 ಸರಣಿ ವರದಿಗಳು

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ತ್ಯಾಜ್ಯ ಕಂಪನಿಗಳು ಹೊರಸೂಸುತ್ತಿರುವ ವಿಷಗಾಳಿ ಹಾಗೂ ದುರ್ನಾತದಿಂದಾಗಿ ಈ ಭಾಗದ ಹದಿನೈದಕ್ಕೂ ಹೆಚ್ಚು ಹಳ್ಳಿಗಳ ಜನ-ಜಲ ಜೀವನದ ಮೇಲಾಗುತ್ತಿರುವ ಅಡ್ಡ ಪರಿಣಾಮಗಳ ಕುರಿತು "ಕನ್ನಡಪ್ರಭ " ಇದೇ ಏ.9 ರಿಂದ ಈವರೆಗೆ (ಸೆ.6) ಪ್ರತಿದಿನ ನಿರಂತರ 150 ಸರಣಿ ವರದಿಗಳನ್ನು ಪ್ರಕಟಿಸಿದೆ.

ವಿವಿಧ ಆಯಾಮಗಳಲ್ಲಿ ಪ್ರಕಟಗೊಂಡ ಈ ವರದಿಗಳು ಜನಜಾಗೃತಿಗೆ ಕಾರಣವಾಗಿವೆಯಲ್ಲದೆ, ಆಡಳಿತದ ಒಂದೆಡೆ ಕ್ರಮಕ್ಕೆ, ಸದ್ದಿಲ್ಲದ ಹೋರಾಟಗಳು ಚಿಗುರೊಡೆಯತೊಡಗಿವೆ. ಜನಜಾಗೃತಿಯ ಫಲವಾಗಿ, ಕಂಪನಿಗಳ ಅಟ್ಟಹಾಸಕ್ಕೆ ಬಹುತೇಕ ಅಂಕುಶ ಹಾಕಿದಂತಿದೆ. ತಮ್ಮದೇ ಆಟ ಮುಂದುವರೆಸಿದ್ದ ಕೆಲವು ಕಂಪನಿಗಳಿಗೆ ಬೀಗಮುದ್ರೆ ಸಾಧ್ಯತೆಯಿದೆ.

ಕನ್ನಡಪ್ರಭ 150 ದಿನಗಳ ಕಾಲ ಸತತ ಸರಣಿ ವರದಿಗಳ ನಂತರ, ಮುಂದಿನ ಬೆಳವಣಿಗೆಗಳ ಬಗ್ಗೆ "ಕನ್ನಡಪ್ರಭ " ಹದ್ದಿನ ಕಣ್ಣು ಇಡಲಿದ್ದು, ಆ ಬಗ್ಗೆಯೂ ಆಯಾ ಘಟನಾವಳಿಗಳನುಸಾರ ಕಾಲಕಾಲಕ್ಕೆ ವರದಿಗಳ ಪ್ರಕಟಿಸಲಿದೆ.

------------------

ಕನ್ನಡಪ್ರಭ ಸರಣಿ ವರದಿಗಳು ನಮ್ಮ ನೋವಿಗೆ ಮುಲಾಮು ಹಚ್ಚಿದಂತಿವೆ. ಕಂಪನಿಗಳ ಅಟ್ಟಹಾಸದಿಂದ ಮೌನವಾಗಿದ್ದ ನಮಗೆ ಈ ವರದಿಗಳು ಸದ್ದಿಲ್ಲದೆ ಹೋರಾಟ, ಜನಜಾಗೃತಿಗೆ ಕಾರಣವಾಗಿವೆ. ಎಷ್ಟೇ ಪ್ರಮುಖ ಸಂದರ್ಭಗಳಲ್ಲಿ "ಕನ್ನಡಪ್ರಭ ", ಅವೆಲ್ಲಗಳಿಗಿಂತ ಮುಖ್ಯವಾಗಿ, ಕಡೇಚೂರ ಸುದ್ದಿಗೆ ಮೊದಲ ಆದ್ಯತೆ ನೀಡಿ, 150 ಸರಣಿ ವರದಿಗಳನ್ನು ಪ್ರಟಿಸಿರುವುದು, ಜನ-ಜಲ ಜೀವಪರ ಕಾಳಜಿ ವಹಿಸಿದ ಪ್ರಧಾನ ಸಂಪಾದಕರ ಕಾಳಜಿಗೆ ಧನ್ಯವಾದಗಳು. ವಿಷಕಾರಿ ತ್ಯಾಜ್ಯ ಕಂಪನಿಗಳ ವಿರುದ್ಧ ಕಾನೂನು ಹೋರಾಟದ ಹೆಜ್ಜೆ ಇಟ್ಟಿದ್ದೇವೆ, ಯಶ ಖಂಡೀತ. : ಭೀಮಣ್ಣ ವಡವಟ್‌, ಸಾಮಾಜಿಕ ಕಾರ್ಯಕರ್ತರು, ಸೈದಾಪುರ. (5ವೈಡಿಆರ್‌9)