ಬೆದರುಗೊಂಬೆಯಾದ ಜಾತಿ ಗಣತಿ: ವಿಜಯೇಂದ್ರ ಆರೋಪ

| Published : Apr 12 2025, 12:48 AM IST

ಸಾರಾಂಶ

ಯಾವ್ಯಾವಾಗ ಮುಖ್ಯಮಂತ್ರಿಯ ಕುರ್ಚಿ ಅಲುಗಾಡುತ್ತೋ ಆವಾಗಲೆಲ್ಲ ಜಾತಿಗಣತಿ ನೆನಪಾಗುತ್ತದೆ.

ಕಾರವಾರ: ಯಾವ್ಯಾವಾಗ ಮುಖ್ಯಮಂತ್ರಿಯ ಕುರ್ಚಿ ಅಲುಗಾಡುತ್ತೋ ಆವಾಗಲೆಲ್ಲ ಜಾತಿಗಣತಿ ನೆನಪಾಗುತ್ತದೆ. ಮುಖ್ಯಮಂತ್ರಿ ಜಾತಿ ಗಣತಿಯನ್ನು ಬೆದರುಗೊಂಬೆಯಂತೆ ಬಳಕೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.

ಯಲ್ಲಾಪುರಕ್ಕೆ ಆಗಮಿಸಿದ ಅವರು ಜನಾಕ್ರೋಶ ಯಾತ್ರೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಜಾತಿಗಣತಿ ಬಿಡುಗಡೆ ಮಾಡಿ ಆಯಾ ಸಮುದಾಯಗಳಿಗೆ ನ್ಯಾಯ ಕೊಡಬೇಕೆಂಬ ಕಳಕಳಿ ಮುಖ್ಯಮಂತ್ರಿ ಅವರಿಗೆ ಇಲ್ಲ. ಬೆಲೆ ಏರಿಕೆಯಿಂದ ಜನತೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆ ಹೊರಳಿಸಲು ಜಾತಿ ಗಣತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸತತವಾಗಿ ಬೆಲೆ ಏರಿಕೆ ಮಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿದಿದ್ದಾರೆ. ಸರ್ಕಾರದ ಬಗ್ಗೆ ಜನತೆ ಬೇಸತ್ತಿದ್ದಾರೆ. ಜನಾಕ್ರೋಶದ ಬಿಸಿ ಸರ್ಕಾರಕ್ಕೆ ತಟ್ಟಿದೆ. ಹೀಗಾಗಿ ಏ.17ರಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿಕೆ ನೀಡಿದ್ದಾರೆ. ಅವರಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದರು.

ಸರ್ಕಾರ ನೀರು, ಕಸದ ಮೇಲೂ ತೆರಿಗೆ ಹಾಕುತ್ತಿದೆ. ಇದು ಜನ ವಿರೋಧಿ ಸರ್ಕಾರ. ಹಿಂದೂಗಳಿಗೆ, ಪರಿಶಿಷ್ಟ ಜಾತಿ, ಜನಾಂಗದವರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ. ಭ್ರಷ್ಟ ಸರ್ಕಾರದ ಬಣ್ಣ ಬಯಲು ಮಾಡಲು ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ಎಲ್ಲ ಜಿಲ್ಲೆಯಲ್ಲೂ ಹಮ್ಮಿಕೊಂಡಿದೆ. ಎಲ್ಲೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಯಲ್ಲಾಪುರದಲ್ಲೂ ದೊಡ್ಡ ಪ್ರಮಾಣದಲ್ಲಿ ಜನತೆ ಪಾಲ್ಗೊಂಡಿದ್ದಾರೆ ಎಂದರು.

ನಮ್ಮ ಸರ್ಕಾರ ಇದ್ದಾಗ ಕಾಂಗ್ರೆಸ್ 40 ಪರ್ಸೆಂಟ್ ಎಂಬ ರಾಜಕೀಯ ಪ್ರೇರಿತ ಆರೋಪ ಮಾಡಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ತರುವಾಯ ದೇಶದಲ್ಲಿ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಗಳಿಸಿದೆ. ಇದನ್ನು ನಾನು ಹೇಳುತ್ತಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ ಎಂದು ಹೇಳಿದರು.

ಲಂಚ ಕೊಡದೇ ಈ ಸರ್ಕಾರದಲ್ಲಿ ಏನೂ ಆಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘ ದೂರಿದೆ. ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಿಎಂ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಂಬಳ ಕೊಡಲೂ ಹಣ ಇಲ್ಲ. ಪೊಲೀಸರು ಇಲ್ಲೇ ಇದ್ದಾರೆ. ಅವರಿಗೆ ಹಿಂದೆ ಪ್ರತಿ ತಿಂಗಳು 1ನೇ ತಾರೀಕಿನಿಂದ ಸಂಬಳ ಆಗುತ್ತಿತ್ತು. ಈ ಬಾರಿ 8ನೇ ತಾರೀಕು ಆದರೂ ಸಂಬಳ ಆಗಿಲ್ಲ. ಆರ್ಥಿಕ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟಿದೆ ನೀವೇ ನೋಡಿ. ಸಂಪನ್ಮೂಲ ಕ್ರೋಡೀಕರಣ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.