ಇಂದಿನಿಂದ ನಗರದಲ್ಲಿ ಜಾತಿಗಣತಿ ಶುರು

| Published : Oct 04 2025, 02:00 AM IST

ಸಾರಾಂಶ

ರಾಜಧಾನಿ ಬೆಂಗಳೂರಿನ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಶುಕ್ರವಾರ ಅಂತಿಮ ತರಬೇತಿ ಪಡೆದಿರುವ 17,500 ಮಂದಿ ಅಧಿಕಾರಿ ಸಿಬ್ಬಂದಿಯೂ ಶನಿವಾರ ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಶುಕ್ರವಾರ ಅಂತಿಮ ತರಬೇತಿ ಪಡೆದಿರುವ 17,500 ಮಂದಿ ಅಧಿಕಾರಿ ಸಿಬ್ಬಂದಿಯೂ ಶನಿವಾರ ಮನೆ ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

ಕಳೆದ ಸೆ.22 ರಿಂದ ಬೆಂಗಳೂರು ನಗರ ಹೊರತು ಪಡಿಸಿ ರಾಜ್ಯಾದ್ಯಂತ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಭರದಿಂದ ಸಾಗಿದೆ. 11 ದಿನದ ಬಳಿಕ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಿಸಲಾಗುತ್ತಿದೆ.

ವಿವಿಧ ಇಲಾಖೆಗಳಿಂದ ನಿಯೋಜಿಸಲ್ಪಟ್ಟ 17,500 ಸಮೀಕ್ಷಾದಾರರಿಗೆ ಆಯಾ ನಗರ ಪಾಲಿಕೆಗಳಲ್ಲಿ ಒಟ್ಟು ಎರಡು ಬಾರಿ ತರಬೇತಿ ನೀಡಲಾಗಿದೆ. ಶುಕ್ರವಾರ ಅಂತಿಮ ಹಂತದ ತರಬೇತಿ ಪಡೆದುಕೊಂಡಿದ್ದಾರೆ.

ಐದು ನಗರ ಪಾಲಿಕೆಗಳ ಆಯುಕ್ತರ ಮೇಲ್ವಿಚಾರಣೆಯಲ್ಲಿ ಸಮೀಕ್ಷಾ ಕಾರ್ಯ ಜರುಗಲಿದ್ದು, ಅಪರ ಆಯುಕ್ತರು, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಕೆ.ಎ.ಎಸ್ ಅಧಿಕಾರಿಗಳ ನಿಯೋಜನೆ

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಕೆಎಎಸ್ ಹಿರಿಯ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳೆಂದು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಒಟ್ಟು 34 ಕೆಎಎಸ್ ಅಧಿಕಾರಿಗಳು ಸಮೀಕ್ಷಾ ಕಾರ್ಯವನ್ನು ಸುಗಮವಾಗಿ ನಿರ್ವಹಿಸಲು, ಸಮೀಕ್ಷಾದಾರರು ಮತ್ತು ಸರ್ಕಾರದ ಮಧ್ಯೆ ಸಮನ್ವಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರತಿ ವಾರ್ಡ್‌ಗೆ ಒಬ್ಬರಂತೆ ಗ್ರೂಪ್- ಎ ವೃಂದದ ಅಧಿಕಾರಿಗಳನ್ನು ವಾರ್ಡ್ ಮೇಲ್ವಿಚಾರಕರಾಗಿ ಚಾರ್ಜ್ ಅಧಿಕಾರಿಗಳೆಂದು ನೇಮಿಸಲಾಗಿದ್ದು, ಅವರು ಆ ವಾರ್ಡ್‌ನ ಸಮೀಕ್ಷೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ನಿರ್ವಹಿಸಲಿದ್ದಾರೆ.

ಒಬ್ಬರಿಗೆ 300 ಮನೆ ಗುರಿ!

ಪ್ರತಿ 15 ರಿಂದ 20 ಸಮೀಕ್ಷಾದಾರರ ಕಾರ್ಯವನ್ನು ಪರಿಶೀಲಿಸಲು ಒಬ್ಬ ಉಪ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ 300 ಮನೆಗಳಿಗೆ ಒಬ್ಬರಂತೆ ಸಮೀಕ್ಷಾದಾರರನ್ನು ನಿಯೋಜಿಸಲಾಗಿದ್ದು, ಅವರು ತಮ್ಮ ವ್ಯಾಪ್ತಿಯ ಮನೆ ಮನೆಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ನಡೆಸಲಿದ್ದಾರೆ.

ಎರಡು ಸುತ್ತಿನಲ್ಲಿ ತರಬೇತಿ

ಸಮೀಕ್ಷಾ ಕಾರ್ಯಕಾರ್ಯಕ್ಕಾಗಿ ಸರ್ಕಾರಿ ನೌಕರರು, ನಿಗಮ ಮಂಡಳಿಗಳ ಅಧಿಕಾರಿ, ನೌಕರರನ್ನು ನಿಯೋಜಿಸಲಾಗಿದ್ದು, ಸೆ.29 ರಂದು ಮೊದಲನೇ ಸುತ್ತಿನಲ್ಲಿ 33 ತರಬೇತಿ ಕೇಂದ್ರಗಳಲ್ಲಿ 17,500 ಅಧಿಕಾರಿ,ನೌಕರರಿಗೆ ತರಬೇತಿ ನೀಡಲಾಗಿತ್ತು. ಶುಕ್ರವಾರ ಮತ್ತೊಂದು ಬಾರಿ ಸಮೀಕ್ಷಾದಾರರಿಗೆ ತರಬೇತಿ ನೀಡಿದ್ದು, ಪ್ರತೀ ಸಮೀಕ್ಷಾದಾರರಿಗೆ ಸಮೀಕ್ಷೆ ನಡೆಸಲು ವಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ.

ಸಮೀಕ್ಷಾದಾರರಿಗೆ ಕಿಟ್ ವಿತರಣೆ

ಸಮೀಕ್ಷಾದಾರರಿಗೆ ಗುರುತಿನ ಚೀಟಿ, ಕ್ಯಾಪ್, ಬ್ಯಾಗ್, ಕೈಪಿಡಿ, ಸ್ವಯಂ ಘೋಷಣಾ ಪತ್ರ, ಮನೆಯಲ್ಲಿ ಯಾರು ಇಲ್ಲದಿದ್ದರೆ 2ನೇ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಂಟಿಸುವ ಚೀಟಿ ಹಾಗೂ ಇತರ ಸಾಮಗ್ರಿಗಳ ಕಿಟ್ ವಿತರಿಸಲಾಗಿದೆ.

ನಾಗರಿಕರು ಸಹಕರಿಸಲು ಮನವಿ

ಬೆಂಗಳೂರಿನ ಐದು ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರದಿಂದ ಆರಂಭಗೊಳ್ಳುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಾಗರಿಕರು ಅಗತ್ಯ ದಾಖಲೆಗಳನ್ನು (ಆಧಾರ್ ಕಾರ್ಡ್,ರೇಷನ್ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳು) ಇಟ್ಟುಕೊಂಡು ಸಮೀಕ್ಷಾದಾರರಿಗೆ ಸಹಕರಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮನವಿ ಮಾಡಿದೆ.ನಗರ ಪಾಲಿಕೆ ವಾರು ಸಮೀಕ್ಷೆ ಕುಟುಂಬ ವಿವರ

ನಗರ ಪಾಲಿಕೆ ಕುಟುಂಬ ಸಂಖ್ಯೆಬೆಂ.ಕೇಂದ್ರ 5,16,353

ಬೆಂ.ಪೂರ್ವ 9,12,713ಬೆಂ.ಪಶ್ಚಿಮ 14,65,684

ಬೆಂ.ಉತ್ತರ 10,22,926ಬೆಂ.ದಕ್ಷಿಣ 10,94,793

ಒಟ್ಟು.. 50,57,469