ಮುಡಾ ಕಳಂಕ ಮರೆಮಾಚಲು ಜಾತಿ ಗಣತಿ ಮುನ್ನಲೆಗೆ ಯತ್ನ

| Published : Oct 11 2024, 11:57 PM IST

ಸಾರಾಂಶ

ಚಿತ್ರದುರ್ಗ: ತಮ್ಮ ಮೇಲೆ ಬಂದಿರುವ ಮುಡಾ ನಿವೇಶನದ ಹಗರಣ ಕಳಂಕ ಮರೆ ಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಮುನ್ನಲೆಗೆ ತರಲು ಯತ್ನಿಸುತ್ತಿದ್ದಾರೆ ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಚಿತ್ರದುರ್ಗ: ತಮ್ಮ ಮೇಲೆ ಬಂದಿರುವ ಮುಡಾ ನಿವೇಶನದ ಹಗರಣ ಕಳಂಕ ಮರೆ ಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜನಗಣತಿ ಮುನ್ನಲೆಗೆ ತರಲು ಯತ್ನಿಸುತ್ತಿದ್ದಾರೆ ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಬಗ್ಗೆ ಅವರಿಗೆ ನಿಜಕ್ಕೂ ಕಾಳಜಿ ಇದ್ದಲ್ಲಿ ಇಷ್ಟೊತ್ತಿಗೆ ಕಾಂತರಾಜ ವರದಿ ಜಾರಿ ಮಾಡುತ್ತಿದ್ದರು. ಆದರೆ ಕಳಂಕ ನಿವಾರಣೆಗೆ ಜನರ ಗಮನ ಬೇರೆಡೆಗೆ ಸೆಳೆಯಲು ಜಾತಿ ಜನಗಣತಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ ಬಿಜೆಪಿ, ಆರ್‌ಎಸ್‌ಎಸ್ ನವರು ಮೀಸಲಾತಿ ವಿರೋಧಿಗಳು ಎನ್ನಲು ಶುರು ಮಾಡಿದ್ದಾರೆ. ನೆಹರು ದೇಶದ ಪ್ರಧಾನಿಯಾಗಿದ್ದಾಗ ಮೀಸಲಾತಿ ವಿರೋಧಿಸುವಂತೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದನ್ನು ಪ್ರಧಾನಿ ಮೋದಿ ಬಹಿರಂಗಪಡಿಸಿದ್ದಾರೆ. ಪರಿಶಿಷ್ಟ ಜಾತಿಗೆ 15 ರಿಂದ 17 ಪ್ರತಿಶತ, ಪರಿಶಿಷ್ಟ ವರ್ಗಕ್ಕೆ 3 ರಿಂದ 7 ಪ್ರತಿಶತ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಬಡ್ತಿ ಮೀಸಲಾತಿ ಪರವಾಗಿ ಸುಪ್ರೀಂಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದು, ಬಿಜೆಪಿ ಎನ್ನುವುದನ್ನು ಕಾಂಗ್ರೆಸ್ ಮರೆತಂತಿದೆ ಎಂದು ಹೇಳಿದರು.

ಆಧಾರ್ ಕಾರ್ಡ್ ಆಧರಿಸಿ ಪ್ರತಿಯೊಬ್ಬರ ಸಮೀಕ್ಷೆಯಾಗಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸ್ಥಿತಿಗತಿಗಳನ್ನು ಅವಲೋಕಿಸಿ ಹಿಂದುಳಿದ ವರ್ಗ ಹಾಗೂ ಸಣ್ಣ ಸಣ್ಣ ಜಾತಿಗಳಿಗೂ ಮೀಸಲಾತಿ ಕೊಡಬೇಕು. ಕೇವಲ ಹಿಂದೂಗಳಿಗಷ್ಟೆ ಅಲ್ಲ, ಮುಸಲ್ಮಾನರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಸಲ್ಲಿಸಿರುವ ವರದಿಯಲ್ಲಿ 42 ಕೋಟಿ ರು. ನಾಗೇಂದ್ರ ಆಪ್ತನಿಗೆ ಹೋಗಿದೆ. ಇಪ್ಪತ್ತು ಕೋಟಿ ರು. ಚುನಾವಣೆಗೆ ಖರ್ಚಾಗಿದೆ. ಸಿಎಂ ನೇಮಿಸಿರುವ ಎಸ್ಐಟಿ ನಾಗೇಂದ್ರ ಹೆಸರನ್ನು ಉಲ್ಲೇಖಿಸಿಲ್ಲ. ಮೊದಲು ಎಸ್ಐಟಿ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ದಾವಣಗೆರೆ, ಬೆಂಗಳೂರಿನಲ್ಲಿ ಪಾಕಿಸ್ತಾನಿ ಪ್ರಜೆಗಳು ಪತ್ತೆಯಾಗಿದ್ದಾರೆ. ವ್ಯವಸ್ಥಿತ ಜಾಲವೇ ದೇಶದ ಉದ್ದಗಲಕ್ಕೂ ಹರಡಿಕೊಂಡಿದೆ. ಇದರಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಾಗಲಿದೆ. ಭಯೋತ್ಪಾದಕರು ದೇಶದಲ್ಲಿ ನುಸುಳಬಹುದು. ಇವರಿಗೆಲ್ಲಾ ಪಾಸ್‍ಪೋರ್ಟ್ ಹೇಗೆ ಸಿಗುತ್ತದೆಂಬುದೇ ಯಕ್ಷ ಪ್ರಶ್ನೆ ? ಎಂದ ಅವರು, ವಸತಿ ಸಚಿವ ಜಮೀರ್ ವಕ್ಫ್ ಆಸ್ತಿ ಯಾರಪ್ಪನ ಮನೆ ಸ್ವತ್ತಲ್ಲ ಎಂದು ಬಸವನಗೌಡ ಪಾಟೀಲ್ ಯತ್ನಾಳ್‍ ಬಗ್ಗೆ ದುರಹಂಕಾರದ ಮಾತುಗಳನ್ನಾಡಿದ್ದಾರೆ. ಕಂಡ ಕಂಡ ಆಸ್ತಿಯನ್ನೆಲ್ಲಾ ವಕ್ಫ್ ಆಸ್ತಿ ಮಾಡಿಕೊಳ್ಳಲು ಅವರಪ್ಪನ ಮನೆ ಆಸ್ತಿಯಲ್ಲ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ವಕ್ತಾರ ನಾಗರಾಜ್‍ಬೇದ್ರೆ ಹಾಜರಿದ್ದರು.