ಸಾರಾಂಶ
ಹಾವೇರಿ: ಸಾಮಾಜಿಕ ಹಾಗೂ ಶೈಕ್ಷಣಿಕ ಮರು ಸಮೀಕ್ಷೆಯ ಮೊದಲ ದಿನವಾದ ಸೋಮವಾರ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿ ಗಣತಿದಾರರು ಕಿರಿಕಿರಿ ಅನುಭವಿಸುವಂತಾಯಿತು. ಸಾಮಾಜಿಕ ಹಾಗೂ ಶೈಕ್ಷಣಿಕ ಮರು ಸಮೀಕ್ಷೆ ಹಿನ್ನೆಲೆಯಲ್ಲಿ ನಗರದ ಮನೆಗಳ ವಿದ್ಯುತ್ ಮೀಟರ್‌ಗಳಿಗೆ ಅಂಟಿಸಿದ ಸ್ಟಿಕ್ಕರ್ ನಲ್ಲಿರುವ ಯುಎಚ್ ಐಡಿ ನಂಬರ್ ಆ್ಯಪ್‌ನಲ್ಲಿ ಯುಎಚ್ ಐಡಿ ನಂಬರ್ ಹಾಕಿ ಸಬ್‌ಮಿಟ್ ಅಂತ ಒತ್ತಿದರೆ ಆ್ಯಪ್ ಓಪನ್ ಆಗದೇ ಶಿಕ್ಷಕರು ಪರದಾಡುವಂತಾಯಿತು. ಬೆಳಗ್ಗೆಯಿಂದ ಸಮೀಕ್ಷೆಗಾಗಿ ಕಾದು ಕುಳಿತಿದ್ದ ಶಿಕ್ಷಕರಿಗೆ ಆ್ಯಪ್ ಲಿಂಕ್ ಬರೋದು ಕೂಡಾ ವಿಳಂಬ ಆಗಿತ್ತು. ಆದರೆ ಆ್ಯಪ್ ಲಿಂಕ್ ಬಂದ ನಂತರ ಡೌನ್‌ಲೋಡ್ ಮಾಡಿಕೊಂಡು ಸಮೀಕ್ಷೆಗೆ ತೆರಳಿದ ಶಿಕ್ಷಕರಿಗೆ ಆರಂಭದಲ್ಲೇ ಅಡಚಣೆ ಎದುರಿಸುವಂತಾಯಿತು.ಸಮೀಕ್ಷೆಗಾಗಿ ನೀಡಿರುವ ಆ್ಯಪ್ ಓಪನ್ ಆಗದೇ ಸಮೀಕ್ಷೆಗೆ ಪ್ರಾರಂಭದಲ್ಲಿ ಶಿಕ್ಷಕರು ಪರಿತಪಿಸುವಂತಾಯಿತು. ಸಮಸ್ಯೆ ಸರಿಪಡಿಸಲು ಸ್ಥಳಕ್ಕೆ ಬಂದ ಶಿಕ್ಷಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೆಲಕಾಲ ಆ್ಯಪ್ ಓಪನ್ ಆಗದೇ ಪರದಾಡುವಂತಾಯಿತುಸಾಮಾಜಿಕ ಹಾಗೂ ಶೈಕ್ಷಣಿಕ ಮರು ಸಮೀಕ್ಷೆಗಾಗಿ ಜಿಲ್ಲೆಯಲ್ಲಿ ಒಟ್ಟು 3777 ಶಿಕ್ಷಕರ ನಿಯೋಜನೆ ಮಾಡಲಾಗಿದ್ದು, ಸಮೀಕ್ಷೆಯ ಮೊದಲ ದಿನವೇ ಹಾವೇರಿ ನಗರದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ಬಿಟ್ಟರೆ, ಉಳಿದಂತೆ ಜಿಲ್ಲೆಯಲ್ಲಿ ಸಮೀಕ್ಷೆ ಯಾವುದೇ ಅಡೆತಡೆಗಳಿಲ್ಲದೇ ನಡೆಯಿತು. ಸಮೀಕ್ಷೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶನದಂತೆ ಸೋಮವಾರ ನಗರದ ಮಂಜುನಾಥ ಕಾಲೋನಿಯ ಬ್ಲಾಕ್ ಸಿ ನಿವಾಸಿಗಳ ಮನೆಗೆ ಶಿಕ್ಷಕರು ಭೇಟಿ ನೀಡಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಸಮೀಕ್ಷೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ನೋಡಲ್ ಅಧಿಕಾರಿಗಳಾದ ಸೈಯ್ಯದಾ ಆಫ್ರಿನ್‌ಬಾನು ಬಳ್ಳಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸುಬ್ರಾ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ್ ಹಾಗೂ ಇತರರು ಇದ್ದರು. ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಮರು ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಸಮೀಕ್ಷೆ ಕಾರ್ಯಕ್ಕೆ ಜಿಲ್ಲೆಯಲ್ಲಿ 3777 ಶಿಕ್ಷಕರ ನಿಯೋಜನೆ ಮಾಡಲಾಗಿದೆ. ಸಮೀಕ್ಷೆ ಆರಂಭದ ವೇಳೆ ಹಾವೇರಿ ನಗರದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದನ್ನು ಬಿಟ್ಟರೆ, ಉಳಿದಂತೆ ಜಿಲ್ಲೆಯಲ್ಲಿ ಸಮೀಕ್ಷೆ ಸುಸೂತ್ರವಾಗಿ ನಡೆಯಿತು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.