ಸಾರಾಂಶ
ಜಾತಿ ಗಣತಿಯನ್ನು ತಂದು ಕೊಟ್ಟಿದ್ದಾರೆ, ಇವರು ಪಡೆದಿದ್ದಾರಷ್ಟೇ. ನಮ್ಮದು ವಿರೋಧವಂತೂ ಇದ್ದೇ ಇದೆ ಎಂದು ಡಾ.ಶಾಮನೂರು ಶಿವಶಂಕರಪ್ಪ ಅನಮಾಧಾನ ಹೊರಹಾಕಿದರು.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಹತ್ತು ವರ್ಷದ ಹಿಂದಿನ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಜಾತಿ ಗಣತಿ ಕೊಟ್ಟಿದ್ದಾರೆ. ಅದನ್ನು ಕಾಂತರಾಜ ಬರೆದಿದ್ದಾರೋ, ಹೆಗಡೆ ಬರೆದಿದ್ದಾರೋ ಗೊತ್ತಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹರಿಹಾಯ್ದಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷದ ಹಿಂದಿನ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ಜಾತಿ ಗಣತಿ ವರದಿಯನ್ನು ಕೊಟ್ಟಿದ್ದಾರೆ. ನಾವು ವೀರ ಶೈವ ಲಿಂಗಾಯತರು ರಾಜ್ಯದಲ್ಲಿ ಕಡಿಮೆ ಇಲ್ಲ. ಸುಮಾರು 2 ಕೋಟಿ ಜನರಿದ್ದೇವೆ. ಜಾತಿ ಸಮೀಕ್ಷೆ ವರದಿ ಇನ್ನೂ ಸ್ವೀಕಾರ ಮಾಡಿದ್ದಾರಷ್ಟೇ. ಅದನ್ನು ಪಾಸ್ ಮಾಡಿಲ್ಲ ಎಂದರು.
ಜಾತಿ ಗಣತಿಯನ್ನು ತಂದು ಕೊಟ್ಟಿದ್ದಾರೆ, ಇವರು ಪಡೆದಿದ್ದಾರಷ್ಟೇ. ನಮ್ಮದು ವಿರೋಧವಂತೂ ಇದ್ದೇ ಇದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಮುಂದಿನ ನಡೆಯ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಮಹಾಸಭಾದಿಂದಲೇ ಜಾತಿ ಸಮೀಕ್ಷಾ ವರದಿ ಮಾಡಿಸುತ್ತೇವೆ. ನಮ್ಮಲ್ಲಿ ಹಣ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಇವೆ. ನಾವೇ ಹೊಸದಾಗಿ ಗಣತಿ ಮಾಡಿಸುತ್ತೇವೆ ಎಂದು ಅವರು ಸರ್ಕಾರದ ಕ್ರಮಕ್ಕೆ ಅವರು ಸೆಡ್ಡು ಹೊಡೆದರು.ಒಂದು ವೇಳೆ ರಾಜ್ಯ ಸರ್ಕಾರವೇನಾದರೂ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರೆ ಮಹಾಸಭಾದಿಂದ ನಾವೂ ಹೋರಾಟ ಮಾಡುತ್ತೇವೆ. ಒಕ್ಕಲಿಗರು, ಬ್ರಾಹ್ಮಣರು, ವೀರಶೈವ ಲಿಂಗಾಯತರು ಸೇರಿದಂತೆ ಎಲ್ಲರ ವಿರೋಧವೂ ಇದೆ. ಜಾತಿ ಗಣತಿ ವರದಿ ಇನ್ನೂ ಕ್ಯಾಬಿನೆಟ್‌ಗೆ ಬಂದಿಲ್ಲ. ಅದು ಬಂದಾಗ ನೋಡೋಣ ಎನ್ನುವ ಮೂಲಕ ಜಾತಿ ಗಣತಿ ವರದಿಗೆ ಮಹಾಸಭಾದ ತೀವ್ರ ವಿರೋಧವಿದೆಯೆಂಬ ಸಂದೇಶವನ್ನು ಅವರು ಸಾರಿದರು.
ಜಾತಿ ಗಣತಿಯನ್ನು ಕಾಂತರಾಜ ಬರೆದಿದ್ದಾರೋ, ಹೆಗಡೆ ಬರೆದಿದ್ದಾರೋ ಯಾರೆಂಬುದು ಗೊತ್ತಿಲ್ಲ. ವೀರಶೈವ ಲಿಂಗಾಯತರು 2 ಕೋಟಿ ಜನಸಂಖ್ಯೆ ಇದ್ದರೂ, ನಮ್ಮನ್ನು ಕಡಿಮೆ ತೋರಿಸಲಾಗಿದೆ. ಒಂದು ವೇಳೆ ಸರ್ಕಾರ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದರೆ ನಾವಂತೂ ಹೋರಾಟ ಮಾಡುತ್ತೇವೆ. ವೀರಶೈವ ಲಿಂಗಾಯತರಷ್ಟೇ ಅಲ್ಲ, ಒಕ್ಕಲಿಗರು, ಬ್ರಾಹ್ಮಣರೂ ಸೇರಿದಂತೆ ನಾವೆಲ್ಲಾ ಹೋರಾಟ ಮಾಡುತ್ತೇವೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸರ್ಕಾರವು ಜಾತಿ ಗಣತಿ ವರದಿ ಸ್ವೀಕರಿಸಿದ ಕ್ರಮಕ್ಕೆ ತಿರುಗೇಟು ನೀಡಿದರು.