ಸಾರಾಂಶ
ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚರ್ಚೆಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ವರದಿಗೆ ಬಹುತೇಕ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಬರೋಬ್ಬರಿ 169 ಕೋಟಿ ರು. ವೆಚ್ಚದಲ್ಲಿ ಸಿದ್ಧಪಡಿಸಿರುವ ವರದಿಯನ್ನು ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿದ್ದು, ವರದಿಯಲ್ಲಿನ ಅಂಶಗಳ ಬಗ್ಗೆ ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ.
ಈ ವೇಳೆ ವರದಿಯಲ್ಲಿನ ದತ್ತಾಂಶಗಳನ್ನು ಅಧ್ಯಯನ ನಡೆಸಲು ಪ್ರತ್ಯೇಕ ಸಮಿತಿ ರಚಿಸಬೇಕೇ ಅಥವಾ ನೇರವಾಗಿ ಅನುಷ್ಠಾನ ಮಾಡಬೇಕೇ ಎಂಬ ಕುರಿತು ಚರ್ಚಿಸಲಾಗುತ್ತದೆ. ವರದಿಯು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಯಾಗಿರುವ ಕಾರಣ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವ ಅಗತ್ಯವಿಲ್ಲ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದರೆ, ವರದಿ ಅನುಷ್ಠಾನದ ಕುರಿತು ಶುಕ್ರವಾರವೇ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ವರದಿ ಮಂಡನೆಗೆ ಹೈಕಮಾಂಡ್ ಒಪ್ಪಿಗೆ:
ಕಳೆದ ಕೆಲ ದಿನಗಳ ಹಿಂದೆ ದೆಹಲಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇನ್ನಿತರ ನಾಯಕರು ಹೈಕಮಾಂಡ್ ನಾಯಕರೊಂದಿಗೆ ಜಾತಿ ಆಧರಿತ ಜನಗಣತಿ ವರದಿ ಅನುಷ್ಠಾನದ ಕುರಿತು ಚರ್ಚೆ ನಡೆಸಿದ್ದರು. ಅಲ್ಲದೆ, ವರದಿ ಅನುಷ್ಠಾನದಿಂದ ಪಕ್ಷಕ್ಕಾಗುವ ಲಾಭ ಮತ್ತು ರಾಜ್ಯದಲ್ಲಾಗುವ ಬೆಳವಣಿಗೆಗಳ ಕುರಿತು ಕೂಲಂಕಷವಾಗಿ ವಿವರಣೆ ನೀಡಿದ್ದಾರೆ. ಅಂತಿಮವಾಗಿ ಹೈಕಮಾಂಡ್ ನಾಯಕರು ಜಾತಿ ಆಧಾರಿತ ಜನಗಣತಿ ವರದಿ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲೇ ಜಾತಿ ಆಧಾರಿತ ಜನಗಣತಿ ವರದಿಯನ್ನು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿರೋಧದ ನಡುವೆಯೇ ಮಂಡನೆ
ಜಾತಿ ಆಧಾರಿತ ಜನಗಣತಿ ನಡೆಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ (2014) ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಚ್. ಕಾಂತರಾಜು ಅವರನ್ನು ನೇಮಿಸಿದ್ದರು. ಆಯೋಗವು ಸತತ ಗಣತಿ ಕಾರ್ಯ ನಡೆಸಿ ವರದಿಯನ್ನೂ ಸಿದ್ಧಪಡಿಸಿತ್ತು. ಆದರೆ, ಅದನ್ನು ಸರ್ಕಾರಕ್ಕೆ ಸಲ್ಲಿಸಿರಲಿಲ್ಲ. ಅಂತಿಮವಾಗಿ ಕಳೆದ ವರ್ಷ ಪೂರ್ಣ ಪ್ರಮಾಣದ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು.
ಅದಕ್ಕೂ ಮುನ್ನ ವರದಿ ಸಲ್ಲಿಕೆ ವಿಚಾರ ಪ್ರಸ್ತಾಪವಾದಾಗಲೇ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸಂಘಸಂಸ್ಥೆಗಳು, ನಾಯಕರು ವರದಿಗೆ ವಿರೋಧ ವ್ಯಕ್ತಪಡಿಸಿದ್ದರು. ವರದಿ ವೈಜ್ಞಾನಿಕವಾಗಿಲ್ಲ. ಮನೆ ಮನೆ ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸಿದ್ದರು.
ಹಾಗೆಯೇ, ಜಾತಿ ಆಧಾರಿತ ಜನಗಣತಿಯ ಮೂಲ ವರದಿ ಆಯೋಗದಿಂದಲೇ ನಾಪತ್ತೆಯಾಗಿದ್ದು, ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಸಹಿ ಇಲ್ಲ ಎಂಬೆಲ್ಲ ಆರೋಪಗಳು ಕೇಳಿ ಬಂದಿದ್ದವು. ಅದರಲ್ಲೂ ಕಾಂಗ್ರೆಸ್ ಕೆಲ ಸಚಿವರು, ಶಾಸಕರೇ ವರದಿ ಅನುಷ್ಠಾನಕ್ಕೆ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಹಲವು ಬಾರಿ ವರದಿ
ಮಂಡನೆ ಮೂಂದೂಡಿಕೆ
ಜಾತಿ ಆಧಾರಿತ ಜನಗಣತಿ ವರದಿ ಅನುಷ್ಠಾನಕ್ಕೆ ಸಂಬಂಧಿಸಿ 2024 ಅಕ್ಟೋಬರ್‌ನಲ್ಲಿ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಸೇರಿ ಹಿಂದುಳಿದ ವರ್ಗಗಳ 30 ಮಂದಿ ಸಚಿವರು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆಗ ಸಿದ್ದರಾಮಯ್ಯ ಅವರು 2024ರ ಅ. 18ರ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ವರದಿ ಮಂಡನೆಗೆ ಮುಂದಾಗಿರಲಿಲ್ಲ. ಅಲ್ಲದೆ, 2025ರ ಜನವರಿಯಲ್ಲೂ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡಿಸುವುದಾಗಿ ಮತ್ತೊಮ್ಮೆ ತಿಳಿಸಲಾಗಿತ್ತು. ಆದರೆ, ಕೊನೆಗೆ ಅದರಿಂದ ಹಿಂದೆ ಸರಿಯಲಾಗಿತ್ತು. ಇದೀಗ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಗೆ ಸರ್ಕಾರ ನಿರ್ಧರಿಸಿದೆ.