ಸಾರಾಂಶ
ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಭೆಯಲ್ಲಿ ದಲಿತ ಎಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೈಡ್ ಲೈನ್ ಮಾಡಲಾಗಿದೆ.
ಉಡುಪಿ : ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಭೆಯಲ್ಲಿ ದಲಿತ ಎಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೈಡ್ ಲೈನ್ ಮಾಡಲಾಗಿದೆ. ಪಕ್ಷದ ಅತ್ಯುನ್ನತ ನಾಯಕನಾಗಿದ್ದರೂ ಮಧ್ಯದಲ್ಲಿ ಕೂರಿಸದೇ ಬದಿಯಲ್ಲಿ ಪ್ರತ್ಯೇಕವಾಗಿ ಮರದ ಕುರ್ಚಿಯಲ್ಲಿ ಕೂರಿಸಲಾಗಿದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಮಾವೇಶದ ವೇದಿಕೆಯ ಮಧ್ಯದಲ್ಲಿ ಸೋನಿಯಾ, ರಾಹುಲ್ ಕುಳಿತಿದ್ದು, ಖರ್ಗೆಯವರನ್ನು ಪಕ್ಕಕ್ಕೆ ಸರಿಸಲಾಗಿತ್ತು. ತಮ್ಮ ರಾಷ್ಟ್ರೀಯ ಅಧ್ಯಕ್ಷರ ಜೊತೆ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಗಮನಿಸಿ. ಗ್ರಾ.ಪಂ. ಅಧ್ಯಕ್ಷರಾಗಿದ್ದರೂ ಅವರನ್ನು ವೇದಿಕೆಯ ಮಧ್ಯದಲ್ಲಿ ಕೂರಿಸಬೇಕು. ಆದರೆ ಗಾಂಧಿ ಕುಟುಂಬ ಖರ್ಗೆಗೆ ಕೊಟ್ಟ ಮರ್ಯಾದೆ ಗಮನಿಸಿ. ಖರ್ಗೆ ಅವರಿಗೆ ಸ್ವಾಭಿಮಾನ ಇದ್ದಿದ್ರೆ ಅಧಿವೇಶನದಿಂದ ಎದ್ದು ಬರಬೇಕಾಗಿತ್ತು ಎಂದರು.
ದಲಿತರೆನ್ನುವ ಕಾರಣಕ್ಕೆ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಬೆಂಕಿ ಹಾಕಿದಾಗಲೂ ಕಾಂಗ್ರೆಸ್ ಇದೇ ವರ್ತನೆ ತೋರಿತ್ತು. ರಾಷ್ಟ್ರೀಯ ಅಧ್ಯಕ್ಷರಿಂದ ಕಾಲೋನಿಯ ದಲಿತ ಬಂಧುವಿನವರೆಗೆ ಕಾಂಗ್ರೆಸ್ ಇದೆ ಧೋರಣೆ ತೋರಿಸುತ್ತದೆ. ಕಾಂಗ್ರೆಸ್ ಯಾವತ್ತೂ ದಲಿತರ ತುಷ್ಟೀಕರಣ ಮಾಡಿದೆ ಹೊರತು, ದಲಿತರ ಉದ್ಧಾರ ಮಾಡಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗೆ ವಿಫಲವಾಗಿದೆ ಎಂದರೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೇ ಈ ಸರ್ಕಾರವು ಭ್ರಷ್ಟಾಚಾರದಲ್ಲಿ ದೇಶಕ್ಕೆ ನಂಬರ್ ಒನ್ ಎಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ, ಎಐಸಿಸಿ ಅಧಿವೇಶನದಲ್ಲಿ ರಾಜೀನಾಮೆ ಕೊಡಬೇಕಿತ್ತು ಎಂದು ಸುನಿಲ್ ಕುಮಾರ್ ಹೇಳಿದರು.
ಜಾತಿಗಣತಿ ವರದಿಯನ್ನು ಕ್ಯಾಬಿನೆಟ್‌ನಲ್ಲಿ ಮಂಡಿಸುವ ಬಗ್ಗೆ ಮಾಹಿತಿ ಇದೆ. ಆದರೆ ಅದು ಕಾಂತರಾಜ್ ವರದಿಯೋ ಜಯಪ್ರಕಾಶ್ ಹೆಗ್ಡೆ ವರದಿಯೋ ? ಎರಡು ವರದಿಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಸ್ಪಷ್ಟನೆ ಕೊಡಬೇಕು. ಸಿದ್ದರಾಮಯ್ಯ ಅವರ ಇಂತಹ ವಿಭಿನ್ನ ಧೋರಣೆಗಳನ್ನು ಜನ ದೀರ್ಘಕಾಲ ನಂಬುದುವುದಿಲ್ಲ ಎಂದರು.