ಜಾತಿ ವ್ಯವಸ್ಥೆ ಬಾವೀಲಿ ತುಂಬಿರುವ ಕಸ : ಮುಖ್ಯಮಂತ್ರಿ ಸಿದ್ದರಾಮಯ್ಯ

| N/A | Published : Apr 20 2025, 01:57 AM IST / Updated: Apr 20 2025, 11:03 AM IST

ಜಾತಿ ವ್ಯವಸ್ಥೆ ಬಾವೀಲಿ ತುಂಬಿರುವ ಕಸ : ಮುಖ್ಯಮಂತ್ರಿ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಬಾವಿಯಲ್ಲಿರುವ ಕಸದಂತೆ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

 ತುಮಕೂರು : ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ಬಾವಿಯಲ್ಲಿರುವ ಕಸದಂತೆ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕುರುಬರ ಸಾಹಿತ್ಯ, ಸಾಂಸ್ಕೃತಿಕ ಸಮಾವೇಶಕ್ಕೆ ಚಾಲನೆ ನೀಡಿ 31 ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ದಲಿತರು, ಶೂದ್ರರು ಬುದ್ಧಿವಂತರಾದರೆ ಕಥೆ ಕಟ್ಟುತ್ತಾರೆ. ದಲಿತರು, ಶೂದ್ರರಿಗೆ ಅವಕಾಶ ಸಿಕ್ಕಿದ್ದಕ್ಕೆ ಅವರು ಬುದ್ಧಿವಂತರಾಗಿದ್ದಾರೆ. ನನಗೆ ಅವಕಾಶ ಸಿಕ್ಕಿದ್ದರಿಂದ ನಾನು ಮುಖ್ಯಮಂತ್ರಿ ಆದೆ ಎಂದರು.

ಮಹರ್ಷಿ ವಾಲ್ಮೀಕಿ ದರೋಡೆಕಾರನಾಗಿದ್ದ ಎನ್ನುವುದು ಸುಳ್ಳು. ಹಾಗೆಯೇ ಕಾಳಿಮಾತೆ, ಕಾಳಿದಾಸನ ನಾಲಿಗೆಯ ಮೇಲೆ ಅಕ್ಷರ ಬರೆದಿದ್ದಕ್ಕೆ ದೊಡ್ಡ ಸಾಹಿತಿ ಆದ ಎನ್ನುವ ಮಾತುಗಳಿಗೆ ಕಿವಿಗೊಡಬೇಡಿ ಎಂದರು.

ಹಣೆ ಬರಹ ಬರೆದ ಬ್ರಹ್ಮ ಒಬ್ಬರಿಗೆ ಶಿಕ್ಷಣ, ಮತ್ತೊಬ್ಬರಿಗೆ ಅನಕ್ಷರತೆ ಸಿಗಲಿ ಅಂತ ಬರೆದರಾ? ಒಬ್ಬನಿಗೆ ಬಡವನಾಗು, ಮತ್ತೊಬ್ಬನಿಗೆ ಶ್ರೀಮಂತನಾಗು ಅಂತ ಬ್ರಹ್ಮ ಬರೆದರಾ? ಒಬ್ಬ ಹೊಟ್ಟೆತುಂಬ ಉಣ್ಣಬೇಕು, ಉಳಿದವರು ಹಸಿವಿನಿಂದ ಬಿದ್ದಿರಬೇಕು ಎಂದು ಬ್ರಹ್ಮ ಬರೆದುಬಿಟ್ಟರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅಹಿಂದ ಸಮಾಜ ಮತ್ತು ಎಲ್ಲಾ ಜಾತಿ, ಧರ್ಮಗಳ ಬಡತನ, ಹಸಿವು ನಿವಾರಣೆ ಆಗಬೇಕು. ಅನ್ನಕ್ಕಾಗಿ ಯಾರೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿ ನಿಲ್ಲಬಾರದು ಎನ್ನುವ ಕಾರಣದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದು ಸ್ಮರಿಸಿದರು.

ಮನುಸ್ಮೃತಿ ಕಾರಣದಿಂದಾಗಿ ಜಾತಿ ಶೋಷಣೆ, ಅಸಮಾನತೆ, ದೌರ್ಜನ್ಯ ಹೆಚ್ಚಾಯಿತು ಎಂದ ಅವರು, ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದರು. ಅದಕ್ಕಾಗಿ 12ನೇ ಶತಮಾನದಲ್ಲಿ ಬಸವಣ್ಣ ಕರ್ಮ ಸಿದ್ದಾಂತ ತಿರಸ್ಕರಿದ್ದಾರೋ ಗೊತ್ತಿಲ್ಲ ಎಂದರು.

ಭಾರತಕ್ಕೆ ಸ್ವಾತಂತ್ರ್ಯ 1947ರಲ್ಲಿ ಬಂದು, ಜ. 26 1950 ರಲ್ಲಿ ಸಂವಿಧಾನ ಜಾರಿಯಾಯಿತು. ಸಂವಿಧಾನ ಬಂದು 75 ವರ್ಷವಾದರೂ ಅಸ್ಪೃಶ್ಯತೆ ಇನ್ನೂ ಹೋಗಿಲ್ಲ, ಅನೇಕ ಕಡೆ ದಲಿತರನ್ನು ದೇವಾಲಯಗಳ ಒಳಗೆ ಬಿಡುವುದಿಲ್ಲ ಎಂದರು.

ಅನೇಕ ವರ್ಷಗಳ ಕಾಲ‌ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿ ಪ್ರಕಾರ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಸಮಾನತೆ ಬರಲು ಕಾರಣವಾಯ್ತು ಎಂದು ವ್ಯಾಖ್ಯಾನಿಸಿದರು.

ಶಿಕ್ಷಣ ಬಂದ ಮೇಲೆ ಎಲ್ಲರಿಗೂ ಅವಕಾಶ ಸಿಗುತ್ತಿದೆ. ನಮ್ಮ ತಂದೆ ತಾಯಿ ಓದಿರಲಿಲ್ಲ. ನಾನು ಓದಿಲ್ಲ ಅಂದರೆ ಇಂದು ಮುಖ್ಯಮಂತ್ರಿ ಆಗಲು ಆಗುತ್ತಿತ್ತಾ ಎಂದ ಅವರು, ನಿಮಗೆ ಅವಕಾಶ ಸಿಕ್ಕಿದೆ ನಿಮ್ಮ ಅನುಭವವನ್ನು ಬರೆಯಿರಿ ಎಂದರು.

ಬಡವ ಶ್ರೀಮಂತನಾಗಬಹುದು. ದಲಿತ ಜಾತಿಯವರು ಬ್ರಾಹ್ಮಣ ಆಗಲು ಸಾಧ್ಯನಾ? ಹಾಗೆಯೇ ಕುರುಬ ಮೇಲ್ಜಾತಿ ಆಗಲು ಆಗುತ್ತಾ? ಆರ್ಥಿಕ ಚಾಲನೆ ಸಿಕ್ಕರೇ ಮಾತ್ರ ಇವೆಲ್ಲಾ ಸಾಧ್ಯ ಎಂದು ಹೇಳಿದರು.