ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಾಜಕೀಯ ಪಕ್ಷಾಂತರವನ್ನು ತಡೆಗಟ್ಟಲು ಮತ್ತು ರಾಜಕಾರಣಿಗಳು ಅಧಿಕಾರದ ಆಮಿಷಕ್ಕಾಗಿ ಪಕ್ಷಗಳನ್ನು ಬದಲಾಯಿಸುವುದನ್ನು ತಡೆಯಲು ಭಾರತೀಯ ಸಂವಿಧಾನದ ಹತ್ತನೇ ವೇಳಾಪಟ್ಟಿಯನ್ನು 1985ರಲ್ಲಿ ತಿದ್ದುಪಡಿ ಮಾಡಲಾಯಿತು. ರಾಜೀವ್ ಗಾಂಧಿಯವರ ಅಧಿಕಾರಾವಧಿಯಲ್ಲಿ 52ನೇ ತಿದ್ದುಪಡಿಯಿಂದ ಪರಿಚಯಿಸಲ್ಪಟ್ಟ ಸಂವಿಧಾನದ ಹತ್ತನೇ ಅನುಚ್ಛೇದದಲ್ಲಿ ಪಕ್ಷಾಂತರ ವಿರೋಧಿ ಕಾನೂನು ಇದೆ. ಈ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ತರದಿದ್ದರೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿತ್ತು ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ನಂದಿ.ಎಂ.ಆಂಜಿನಪ್ಪ ಅಭಿಪ್ರಾಯಪಟ್ಟರು.ನಗರದ ವಾಪಸಂದ್ರ ಬಡಾವಣೆಯ ಜಗದ್ಗುರು ಚನ್ನಮಲ್ಲಿಕಾರ್ಜುನ ನಿಡುಮಾಮಿಡಿ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಮತ್ತು ಸಿದ್ದರಾಮಯ್ಯ ಕಾನೂನು ಕಾಲೇಜಿನ ವತಿಯಿಂದ 75 ನೇ ಸಂವಿಧಾನ ದಿನ ಆಚರಣೆ ಮತ್ತು 50ನೇ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ರತ್ನ ಬಿ,ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಭಾರತದ ಸಂವಿಧಾನ ಅಂಗೀಕಾರವಾಗಿದ್ದು 1949 ರ ನವೆಂಬರ್ 26 ರಂದೇ, ಆದರೂ ಅನುಷ್ಠಾನಕ್ಕೆ ಬಂದಿದ್ದು 1950 ರ ಜನವರಿ 26 ರಂದು. ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ದೇಶದ ಜನರನ್ನು ಸಶಕ್ತಗೊಳಿಸಬೇಕು. ಸರ್ವರಿಗೂ ಸಮಾನತೆಯೊದಗಿಸಬೇಕು ಎಂದು ಮೂಲಭೂತ ಹಕ್ಕುಗಳು, ಕರ್ತವ್ಯಗಳನ್ನು ಸಂವಿಧಾನವು ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು. ನಮ್ಮ ದೇಶದಲ್ಲಿ ಹೊಸ ಶಕೆ ಆರಂಭವಾಗಿದ್ದು ಸಂವಿಧಾನ ಜಾರಿಗೆ ಬಂದಾಗಿನಿಂದಲೇ. ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವದರ ಜತೆಗೆ ಅವರ ಸಾಧನೆಯ ಬಗ್ಗೆ ತಿಳಿಸಿ ಕೊಡುವುದು ಈ ದಿನದ ವಿಶೇಷತೆ. ಭಾರತದ ಸಂವಿಧಾನಕ್ಕೆ ವಿಶ್ವದಲ್ಲೇ ದೊಡ್ಡ ಸಂವಿಧಾನ ಎಂಬ ಹಿರಿಮೆ ಇದೆ ಎಂದು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ನೀಡಿದಾಗ ನಮ್ಮ ಜನಪ್ರತಿನಿಧಿಗಳು ನ್ಯಾಯ ಮತ್ತು ಸತ್ಯದ ಪಥದಲ್ಲಿ ನಡೆಯುತ್ತಾರೆಂದು ತಿಳಿದಿದ್ದರು. ಆದರೆ, ಪಕ್ಷಾಂತರ ಮಾಡುತ್ತಾರೆಂದು ಅವರು ಕನಸು ಮನಸ್ಸಿನಲ್ಲಿಯೂ ಯೋಚಿಸಿರಲಿಲ್ಲ ಎಂದರು,ಹಾಗೆಯೇ ಬಾರತದಲ್ಲಿ ಜಾತಿ ಪದ್ಧತಿಯು ತೊಲಗಿ ಜಾತ್ಯಾತೀತತೆ ನೆಲಸಲಿ ಎಂಬ ಆಶಯದಿಂದಲೇ ಜಾತ್ಯಾತೀತ ರಾಷ್ಟ್ರವೆಂದು ಘೋಷಿಸಿದ್ದರು. ಭಾರತವು ಜಾತಿ, ಧರ್ಮಗಳ ಸಮನ್ವಯ ರಾಷ್ಟ್ರವಾಗಿ ಹೊರ ಹೊಮ್ಮಿದೆಯೇ ? ಅಕ್ಷರಶ: ಜಾತ್ಯಾತೀತ ರಾಷ್ಟ್ರವಲ್ಲ ಎಂದು ಹೇಳಬಹುದು. ಶತ ಶತಮಾನಗಳಿಂದ ಭಾರತವನ್ನು ಬೆಂಬಿಡದೆ ಕಾಡುತ್ತಿದ್ದ ಅದೆಷ್ಟೋ ಮೌಢ್ಯಗಳು, ಆಚರಣೆ, ಅನಿಷ್ಟ ಪದ್ಧತಿಗಳು ಇತಿಹಾಸದೊಂದಿಗೆ ಅಂತ್ಯಗೊಂಡಿದ್ದರೂ, ಇಂದಿಗೂ ಜನ ಮಾನಸದಲ್ಲಿ ಅವುಗಳ ಛಾಪು ಮಾತ್ರ ಅಚ್ಚಳಿದಿಲ್ಲ, ಇದಕ್ಕೆ ಒಂದು ಪ್ರಚಲಿತ ಉದಾಹರಣೆಯೇ ಜಾತೀಯತೆ. ಜಾತಿ ಪದ್ಧತಿಯು ಒಂದು ಸಾಮಾನ್ಯ ಪಿಡುಗಾಗಿರದೆ ಈ ಸರ್ವತಂತ್ರ ಸ್ವತಂತ್ರ ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಲೇ ಇದೆ. ಹಾಗೂ ಜಾತೀಯತೆಯು ರಾಜಕೀಯ ಕಾರಣಗಳಿಗಾಗಿಯೇ ಪ್ರಸಿದ್ಧಿಯಾಗಿದೆ. ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳು ಇದಕ್ಕೆ ಪುಷ್ಟಿ ನೀಡುತ್ತಿವೆ. ನಾವು ಮಾತ್ರ ಇಂದೂ ಸಹಾ ಜಾತೀಯತೆಯನ್ನು ಬಿಟ್ಟಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಕನ್ನಡಿಗರಾದ ನಾವು ರಾಜ್ಯಕ್ಕೆ ಬರುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವುದನ್ನು ಬಿಟ್ಟು ಅವರ ಬಾಷೆಯನ್ನೇ ಕಲಿಯುತ್ತಿರುವುದು ವಿರ್ಪಯಾಸವಾಗಿದೆ. ಇನ್ನು ಕನ್ನಡ ಬೆಳೆಯಲಿ ಎಂದರೆ ಎಲ್ಲಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ರಾಷ್ಟ್ರೀಯ ಅಹಿಂದ ಸಂಘಟನೆಯ ಕಾರ್ಯಾಧ್ಯಕ್ಷ ಕಳವಾರ ಶ್ರೀಧರ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮಾಜಿ ಜಿಪಂ ಸದಸ್ಯ ಮುನೇಗೌಡ, ಜಚನಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶಿವಜ್ಯೋತಿ, ಪ್ರಾಂಶುಪಾಲ ರವಿ. ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಮಯ್ಯ,ಮಾಜಿ ಸಮಾಜ ಸೇವಕ ನಂದಿ ಎಂ.ಎಂ.ಬಾಷ ಮತ್ತಿತರರು ಇದ್ದರು.