ಸಾರಾಂಶ
ಮುಳಗುಂದ: ಸಮೀಪದ ಚಿಂಚಲಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಎದುರಾಗಿದೆ.
ಇಲ್ಲಿನ ಬಹುತೇಕ ಚರಂಡಿಗಳು ಹೂಳು ತುಂಬಿಕೊಂಡಿವೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೆ ಅಲ್ಲೇ ನಿಂತು ದುರ್ನಾತ ಬೀರುತ್ತಿದೆ. ಇನ್ನೂ ಕೆಲವೆಡೆ ಸಿಸಿ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಗ್ರಾಪಂ ಹತ್ತಿರದ ಚರಂಡಿಯಲ್ಲಿ ಹುಲ್ಲು ಬೆಳೆದು ಸುಮಾರು ತಿಂಗಳುಗಳೆ ಕಳೆದಿವೆ. ಆದರೂ ಸಹ ಸ್ವಚ್ಛತೆಗೆ ಗ್ರಾಮ ಪಂಚಾಯ್ತಿ ಮುಂದಾಗಿಲ್ಲ.ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲು ಜಾಲಿಗಿಡ, ಪಾರ್ಥಿಯಂ ಕಸ ಬೆಳೆದು ನಿಂತಿದೆ, ಪಂಚಾಯ್ತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಗೇಟ್ ಬಳಿ ಗೋಡೆ ಕಾಮಗಾರಿ ಅಪೂರ್ಣವಾಗಿದೆ. ಅಂಗವಾನವಾಡಿ ಕಟ್ಟಡ ಶಿಥಿಲವಾದ ಕಾರಣ ಮೂಲಸೌಕರ್ಯ ಇಲ್ಲದ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿದೆ. ಶಿಥಿಲ ಕಟ್ಟಡದ ದುರಸ್ತೆ ಕಾರ್ಯ ಕೈಗೊಂಡಿಲ್ಲ. ಗ್ರಾಮ ಪಂಚಾಯ್ತಿ ಆವರಣದಲ್ಲಿ ಜಾಹೀರಾತು ಫಲಕ ಮುರಿದು ಬಿದ್ದು ಅಪಾಯ ಹಂತದಲ್ಲಿದೆ, ಅದನ್ನು ಸಹ ದುರಸ್ತಿ ಮಾಡದೆ ಹಾಗೇ ಬಿಡಲಾಗಿದೆ.
ಗ್ರಾಮದ ಸೌಂದರ್ಯ ಹೆಚ್ಚಿಸಿ ಸುಗಮ ಸಂಚಾರಕ್ಕಾಗಿ ವಿವಿಧಡೆ ಸಿಸಿ ರಸ್ತೆ, ಚರಂಡಿ ಮಾಡಿದ್ದಾರೆ. ಆದರೆ ತೇರಿನಗಡ್ಡಿ ಮನೆ ಹತ್ತಿರ ಕೊಳಚೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ. ನೀರು ಮುಂದೆ ಸಾಗಲು ಚರಂಡಿ ಸಹ ಇಲ್ಲ. ಇದರಿಂದ ನೀರು ನಿಂತು ಸೊಳ್ಳೆಗಳ ಉತ್ಪತ್ತಿತಾಣವಾಗಿದೆ. ಇದೇ ಸ್ಥಳದಲ್ಲೆ ವಾರದ ಸಂತೆ ನಡೆಯುತ್ತಿದೆ, ಸಂತೆ ತ್ಯಾಜ್ಯದಿಂದ ಚರಂಡಿಗಳು ತುಂಬಿಕೊಡಿವೆ. ಸ್ವಚ್ಛತೆ ಕೈಗೊಳ್ಳಬೇಕಿದ್ದ ಗ್ರಾಮ ಪಂಚಾಯ್ತಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮದ ಕಾಶಪ್ಪ ಶಿವಳ್ಳಿ ಆರೋಪಿಸಿದರು.ಗ್ರಾಪಂ ಸ್ವಚ್ಛತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ ತಗ್ಗು ಗುಂಡಿ, ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ. ಸೊಳ್ಳೆ ನಾಶಕ ಸಿಂಪಡನೆ, ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲ ಕಳೆಯುವ ಸ್ಥಿತಿ ಎದುರಿಸುವಂತಾಗಿದೆ. ಕೊಡಲೆ ಗ್ರಾಪಂ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.