ಸಾರಾಂಶ
ಬೆಂಗಳೂರು ದಕ್ಷಿಣ ಕ್ಷೇತ್ರದ ಹೆನ್ನಾಗರ ಯಲ್ಲಮ್ಮ ದೇವಿ ಬ್ರಹ್ಮ ರಥೋತ್ಸವದಲ್ಲಿ ದನಗಳ ಜಾತ್ರೆ ಆಕರ್ಷಣೆ, ಹಳ್ಳೀಕಾರ್, ಅಮೃತ್ ಮಹಲ್ ತಳಿಯ ದನಗಳನ್ನು ಕಣ್ತುಂಬಿಕೊಂಡ ಭಕ್ತರು
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ಕ್ಷೇತ್ರದ ಹೆನ್ನಾಗರದಲ್ಲಿ ಯಲ್ಲಮ್ಮ ದೇವಿಯ ಬ್ರಹ್ಮರಥೋತ್ಸವ ಪ್ರಯುಕ್ತ ಭಾರಿ ದನಗಳ ಜಾತ್ರೆ ಸೇರಿದೆ. ಸಿಂಗಾರಗೊಂಡಿದ್ದ ದನಗಳ ನೋಡಲು ಆಕರ್ಷಣೀಯವಾಗಿದ್ದು, ನೋಡುಗರ ಕಣ್ಮನ ಸೆಳೆಯಿತು. ಅಲ್ಲದೆ ರಸ್ತೆ ಎರಡೂ ಬದಿ ಜನ ಜಮಾಯಿಸಿ ನೂಕುನುಗ್ಗಲು ಉಂಟಾಗಿತ್ತು.25 ವರ್ಷಗಳ ನಂತರ ದನಗಳ ಜಾತ್ರೆ ನಡೆಯುತ್ತಿದೆ. ₹25 ಸಾವಿರದಿಂದ ₹7 ಲಕ್ಷ ಬೆಲೆ ಬಾಳುವ ದೇಶಿ ತಳಿ ಹಳ್ಳೀಕರ್, ಅಮೃತ ಮಹಲ್ ಜೋಡಿ ಎತ್ತುಗಳು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ 150ಕ್ಕೂ ಹೆಚ್ಚು ಜೊತೆ ಜಾನುವಾರುಗಳನ್ನು ನೋಡಿ ಜನರು ಕಣ್ತುಂಬಿಕೊಂಡರು. ಜಾತ್ರೆಯಲ್ಲಿ ಚಿನ್ನದ ಚೈನ್ ಹಾಕಿಕೊಂಡು ಬಂದಿದ್ದ ಚಂದಾಪುರದ ರಾಜಣ್ಣ ಎಂಬುವವರಿಗೆ ಸೇರಿದ ಹಳ್ಳಿಕಾರ್ ಎತ್ತಿನ ಜೋಡಿ ಕಣ್ಮನ ಸೆಳೆಯಿತು.
ಕಾರ್ಯಕ್ರಮಕ್ಕೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ಚಾಲನೆ ನೀಡಿದರು. ಎಲ್ಲಮ್ಮ ದೇವಿಯ ಬ್ರಹ್ಮರಥೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತಾದಿಗಳು ರಥವನ್ನು ಎಳೆದು ಸಂಭ್ರಮಿಸಿದರು.ದೇವಾಲಯದ ಆವರಣದಿಂದ ವೀರಭದ್ರನ ಕುಣಿತ, ನಂದಿಧ್ವಜ ಕುಣಿತ, ವೀರಗಾಸೆ ಮತ್ತು ಡೊಳ್ಳು ಕುಣಿತ ಹಾಗೂ ಸೋಮನ ಕುಣಿತದೊಂದಿಗೆ ದೇವರ ಮೂರ್ತಿಗಳನ್ನು ಉತ್ಸವದಲ್ಲಿ ಕೊಂಡೊಯ್ಯಲಾಯಿತು. ಜಾತ್ರಾ ಮಹೋತ್ಸವದಲ್ಲಿ ಅಪಾರ ಭಕ್ತ ಸಮೂಹ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ನೆರೆದಿದ್ದ ಎಲ್ಲರಿಗೂ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು.
ಹೆನ್ನಾಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್, ಬಿಜೆಪಿ ಮುಖಂಡ ಜಯರಾಂ ಇದ್ದರು.