ಹುಲಿ ದಾಳಿಗೆ ಜಾನುವಾರು ಬಲಿ: 7 ಪ್ರಕರಣಗಳಿಗೆ ಪರಿಹಾರ ವಿತರಣೆ

| Published : Nov 07 2024, 11:56 PM IST

ಹುಲಿ ದಾಳಿಗೆ ಜಾನುವಾರು ಬಲಿ: 7 ಪ್ರಕರಣಗಳಿಗೆ ಪರಿಹಾರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಮಂಗಲ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹುಲಿ ದಾಳಿಯಿಂದ ಏಳು ಜಾನುವಾರು ಸಾವು ಪ್ರಕರಣಗಳಿಗೆ ಸ್ಪಂದಿಸಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಪರಿಹಾರ ವಿತರಿಸಿದರು. ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಜಾನುವಾರುಗಳ ಮಾಲೀಕರಿಗೆ ತಲಾ ರು. 30 ಸಾವಿರದಂತೆ ಒಟ್ಟು 2.10 ಲಕ್ಷದ ಪರಿಹಾರ ವಿತರಿಸಿದರು.

ಕನ್ನಡ್ರಪ್ರಭ ವಾರ್ತೆ ಮಡಿಕೇರಿ

ಶ್ರೀಮಂಗಲ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹುಲಿ ದಾಳಿಯಿಂದ ಏಳು ಜಾನುವಾರು ಸಾವು ಪ್ರಕರಣಗಳಿಗೆ ಸ್ಪಂದಿಸಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಪರಿಹಾರ ವಿತರಿಸಿದರು.

ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಜಾನುವಾರುಗಳ ಮಾಲೀಕರಿಗೆ ತಲಾ ರು. 30 ಸಾವಿರದಂತೆ ಒಟ್ಟು 2.10 ಲಕ್ಷದ ಪರಿಹಾರ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಶ್ರೀಮಂಗಲ ಭಾಗದಲ್ಲಿ ಹುಲಿಯಿಂದ ಏಳು ಕಡೆ ದಾಳಿಯಾಗಿ ಜಾನುವಾರುಗಳನ್ನು ರೈತರು ಕಳೆದುಕೊಂಡಿದ್ದರು. ಇದರಲ್ಲಿ ನಾಲ್ಕು ಪ್ರಕರಣದಲ್ಲಿ ನೇರವಾಗಿ ಅವರ ಖಾತೆಗೆ ಪರಿಹಾರ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಮೂರು ಪ್ರಕರಣದ ಪರಿಹಾರವನ್ನು ಕೂರ್ಗ್ ಫೌಂಡೇಶನ್ ಅನುದಾನದಲ್ಲಿ ಚೆಕ್ ಮೂಲಕ ನೀಡಲಾಗಿದೆ ಎಂದರು.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವನ್ಯಪ್ರಾಣಿ- ಮಾನವ ಸಂಘರ್ಷದಿಂದ ಬೆಳೆ ಹಾನಿ, ಜಾನುವಾರುಗಳ ಸಾವು, ಮಾನವ ಪ್ರಾಣಹಾನಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ 25 ವರ್ಷಗಳಿಂದ ವನ್ಯಪ್ರಾಣಿಗಳ ಹಾವಳಿ, ಮಾನವ ಪ್ರಾಣ ಹಾನಿ, ಬೆಳೆ ನಷ್ಟ ಪ್ರಕರಣಗಳು ಹೆಚ್ಚಾಗಿವೆ. ಅರಣ್ಯ ಇಲಾಖೆ ಸಹ ಇಂತಹ ಪ್ರಕರಣಗಳಿಗೆ ಸ್ಪಂದಿಸುವುದರೊಂದಿಗೆ ಕಾರ್ಯಾಚರಣೆ ಸಂದರ್ಭದಲ್ಲಿಯೂ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ಹುಲಿ ಹಿಂತಿರುಗಿರುವುದು ಖಚಿತ:

ಈಗಾಗಲೇ ಶ್ರೀಮಂಗಲ ಮತ್ತು ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ ಒಂದುವರೆ ತಿಂಗಳುಗಳಿಂದ ಪ್ರತ್ಯೇಕವಾದ ಪ್ರಕರಣದಲ್ಲಿ ಹುಲಿಯಿಂದ ಜಾನುವಾರುಗಳ ಮೇಲೆ ದಾಳಿ ಮತ್ತು ಹುಲಿ ಸಂಚಾರ ಹಿನ್ನಲೆ ನಡೆಸಿದ ಒಂದು ವಾರದ ಕಾರ್ಯಾಚರಣೆಯಲ್ಲಿ ಶ್ರೀಮಂಗಲ ವಿಭಾಗದಲ್ಲಿ ಹುಲಿಯು ಅರಣ್ಯಕ್ಕೆ ಹಿಂತಿರುಗಿರುವುದು ಖಚಿತಪಟ್ಟಿದೆ. ಬಾಳೆಲೆ ವ್ಯಾಪ್ತಿಯ ಸುಳುಗೋಡು- ರಾಜಪುರ ಗ್ರಾಮಗಳಲ್ಲಿ ಹುಲಿ ಸಂಚಾರ ಕಂಡುಬಂದ ಹಿನ್ನೆಲೆ ಹಾಗೂ ಜಾನುವಾರುಗಳ ಮೇಲೆ ದಾಳಿ ಹಿನ್ನೆಲೆ ಅಲ್ಲಿಯೂ ಸಹ ಹುಲಿಯನ್ನು ಕಾಡಿಗೆ ಆಟ್ಟುವ ಮೂಲಕ ಕಾರ್ಯಚರಣೆ ಯಶಸ್ವಿಯಾಗಿದೆ ಎಂದು ಸಂಕೇತ್ ಪೂವಯ್ಯ ವಿವರಿಸಿದರು.

ಚೆಕ್ ವಿತರಣೆ: ಜಾನುವಾರುಗಳಿಗೆ ತಲಾ ರು. 30 ಸಾವಿರದಂತೆ ಶ್ರೀಮಂಗಲ ಗ್ರಾಮದ ಬಿ. ಎಂ. ಗಣಪತಿ, ನೆಮ್ಮಲೆ ಗ್ರಾಮದ ಎಂ. ಜಿ. ಕಿಶೋರ್, ತೆರಾಲು ಗ್ರಾಮದ ಬಿ. ಸಿ. ಬೋಪಯ್ಯ ಅವರಿಗೆ ಚೆಕ್ ಮೂಲಕ ಪರಿಹಾರ ವಿತರಿಸಲಾಯಿತು.

ಬೀರುಗ ಗ್ರಾಮದ ರುಕ್ಮಿಣಿ, ಬಿ. ಟಿ. ಮೋಹನ್, ಕುಟ್ಟ ಗ್ರಾಮದ ಪ್ರವರ್ಧನ್, ತೆರಾಲು ಗ್ರಾಮದ ಬಿ. ಎಸ್. ಉತ್ತಪ್ಪ ಅವರ ಖಾತೆಗೆ ಪರಿಹಾರ ನೇರ ವರ್ಗಾವಣೆ ಮೂಲಕ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾ. ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಶ್ರೀಮಂಗಲ ಗ್ರಾ. ಪಂ. ಸದಸ್ಯ ಅಜ್ಜಮಾಡ ಜಯ, ಕೊಡಗು ಬೆಳೆಗಾರ ಒಕ್ಕೂಟದ ಮಾಣೀರ ವಿಜಯ್ ನಂಜಪ್ಪ,ಪ್ರಮುಖರಾದ ತೀತಿರ ಪ್ರಭು ಸುಬ್ಬಯ್ಯ,ಅಪ್ಪಚ್ಚಂಗಡ ಮೋಟಯ್ಯ, ಕಾಳಿಮಾಡ ಪ್ರಶಾಂತ್,ಚೊಟ್ಟೆಯಾಂಡಮಾಡ ವಿಶು, ಮಾಜಿ ವನ್ಯಜೀವಿ ವಾರ್ಡನ್ ಕುಂಞಂಗಡ ಬೋಸ್ ಮಾದಪ್ಪ,ಪರಮಲೆ ಗಣೇಶ್,ಅಜ್ಜಮಾಡ ಪ್ರಮೋದ್, ಶ್ರೀಮಂಗಲ ವನ್ಯ ಜೀವಿ ವಿಭಾಗದ ಆರ್. ಎಫ್. ಓ. ಅರವಿಂದ್, ಡಿ. ಆರ್. ಎಫ್. ಓ. ಗಳಾದ ನವೀನ್, ಶ್ರೀಶೈಲಾ ಮಾಲಿಗೌಡ್ರು ಮತ್ತಿತರರು ಹಾಜರಿದ್ದರು.