ಸಾರಾಂಶ
ಶೃಂಗೇರಿ, ಚರ್ಮಗಂಟು ರೋಗ ಜಾನುವಾರುಗಳ ಮೇಲೆ ಪರಿಣಾಮ ಬೀರಲಿದ್ದು ಈ ಚರ್ಮರೋಗದಿಂದ ರಕ್ಷಣೆ ಮಾಡಬೇಕು ಎಂದು ವಿದ್ಯಾರಣ್ಯಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ತಿಳಿಸಿದರು.
ಪಶು ಇಲಾಖೆಯಿಂದ ಚರ್ಮಗಂಟು ರೋಗ ಲಸಿಕಾ ಅಭಿಯಾನ
ಕನ್ನಡಪ್ರಭ ವಾರ್ತೆ, ಶೃಂಗೇರಿಚರ್ಮಗಂಟು ರೋಗ ಜಾನುವಾರುಗಳ ಮೇಲೆ ಪರಿಣಾಮ ಬೀರಲಿದ್ದು ಈ ಚರ್ಮರೋಗದಿಂದ ರಕ್ಷಣೆ ಮಾಡಬೇಕು ಎಂದು ವಿದ್ಯಾರಣ್ಯಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ತಿಳಿಸಿದರು.
ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಪಶು ಇಲಾಖೆಯಿಂದ ಚರ್ಮಗಂಟು ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವಂತ ರಾಸುಗಳಿಗೆ ರೋಗ ನಿರೋಧಕ ಲಸಿಕೆ ಹಾಕಿಸಬೇಕು. ಆರೋಗ್ಯವಂತ ಪ್ರಾಣಿ ಗಳನ್ನು ಸೋಂಕಿತ ಪ್ರಾಣಿಗಳಿಂದ ಪ್ರತ್ಯೇಕಿಸಬೇಕು. ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಈ ಅಭಿಯಾನದ ಬಗ್ಗೆ ಜನರಲಿ ಅರಿವು ಮೂಡಿಸಬೇಕು ಎಂದರು.ಪಶು ಆರೋಗ್ಯ ಇಲಾಖೆ ಡಾ.ವೆಂಕಟೇಶ್ ಮಾಹಿತಿ ನೀಡಿ ಚರ್ಮಗಂಟು ರೋಗ ದನಗಳಲ್ಲಿ ಮತ್ತು ಎಮ್ಮೆಗಳಲ್ಲಿ ಕಂಡು ಬರುವ ವೈರಸ್ ಕಾಯಿಲೆಯಾಗಿದೆ. ಫಾಕ್ಸ್ ವೈರಿಡೆ ಕುಟುಂಬಕ್ಕೆ ಸೇರಿದ ಕ್ಯಾಪ್ರಿ ವೈರಸ್ ಕುಲದ ವೈರಸ್‌ಗಳಿಂದ ಈ ಕಾಯಿಲೆ ಉಂಟಾಗುತ್ತದೆ. ಎಮ್ಮೆಗಳಿಗೆ ಹೋಲಿಸಿದರೆ ದನಗಳಲ್ಲಿ ಈ ರೋಗ ತೀವ್ರವಾಗಿರುತ್ತದೆ. ರೋಗದ ಪ್ರಮುಖ ಲಕ್ಷಣ ವೆಂದರೆ ಚರ್ಮದಲ್ಲಿ ಗಂಟುಗಳು ಉಂಟಾಗುವುದು.
ಇದು ಪ್ರಾಣಿಜನ್ಯ ರೋಗವಲ್ಲ.ಮನುಷ್ಯರಿಗೆ ಈ ರೋಗ ಹರಡುವುದಿಲ್ಲ. ಸೋಂಕಿತ ರಾಸುಗಳ ಹಾಲನ್ನು ಪ್ಯಾಶ್ಚೀಕರಿಸಿ ಕಾಯಿಸಿ ಬಳಸಬಹುದು. ಸೋಂಕಿತ ಜಾನುವಾರುಗಳ ಸಾಗಾಣಿಕೆಯಿಂದ ಸೋಂಕು ಹರಡಬಹುದಾಗಿದೆ. ನೀರು ಮತ್ತು ಆಹಾರದ ಮೂಲಕವೂ ಈ ರೋಗ ಹರಡುತ್ತದೆ. ಪಶುವೈದ್ಯರ ಮೇಲ್ವಿಚಾರಣೆಯೊಂದಿಗೆ ರೋಗ ತೀವ್ರತೆ ಆಧಾರದ ಮೇಲೆ ಚಿಕಿತ್ಸೆ ನೀಡಬಹುದಾಗಿದೆ ಎಂದರು. ಡಾ.ಶ್ರೀನಿವಾಸ್ ಮತ್ತಿತರರು ಇದ್ದರು.24 ಶ್ರೀ ಚಿತ್ರ 1- ಶೃಂಗೇರಿ ವಿದ್ಯಾರಣ್ಯಪುರದಲ್ಲಿ ಚರ್ಮಗಂಟು ರೋಗ ಲಸಿಕಾ ಅಭಿಯಾನಕ್ಕೆ ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಚಾಲನೆ ನೀಡಿದರು.