ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮೆಸ್ಕಾಂ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ತಾಲೂಕು ಕುಂಸಿಯ ಮೆಸ್ಕಾಂ ವಸತಿ ಗೃಹದಲ್ಲಿ ಗುರುವಾರ ರಾತ್ರಿ ನಡೆದಿದ್ದು, ಬೆನ್ನಲ್ಲೇ ಆತ್ಮಹತ್ಯೆಗೆ ಕಾರಣರು ಎನ್ನಲಾದ ಹಲವರ ಮೇಲೆ ಕುಂಸಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಮೆಸ್ಕಾಂನಲ್ಲಿ ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಂದೀಶ್ (38) ಆತ್ಮಹತ್ಯೆಗೆ ಶರಣಾದ ನೌಕರ. ಈತ ಸಾವಿಗೂ ಮುನ್ನ ಆಡಿಯೋ ರೆಕಾರ್ಡ್ ಮಾಡಿದ್ದು, ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಳ್ಳುತ್ತಿದ್ದೇನೆ. ಕಳೆದ ಸೆಪ್ಟೆಂಬರ್ 21 ರಂದು ನಡೆದಿದ್ದ ದುರ್ಘಟನೆ ಸಂಬಂಧಿಸಿದಂತೆ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಕೆಲವರ ಹೆಸರು ಹೇಳಿರುವುದಾಗಿ ತಿಳಿದು ಬಂದಿದೆ.
ಘಟನೆ ವಿವರ:ಸೆ.21ರಂದು ವಿದ್ಯುತ್ ಸಂಪರ್ಕ ದುರಸ್ತಿ ಮಾಡಲು ಮೆಸ್ಕಾಂ ಗುತ್ತಿಗೆದಾರ ವಿಜಯ ಕುಮಾರ್ ಅವರು ತನ್ನ ಬಳಿ ಕೆಲಸ ಮಾಡಲು ಇಟ್ಟುಕೊಂಡಿದ್ದ ಯುವರಾಜ್ ಗೆ ಸೂಚಿಸಿದ್ದರು. ಇವರ ಮಾತಿನಂತೆ ಯುವರಾಜ್ ಅವರು ಮೆಸ್ಕಾಂ ಅನುಮತಿ ಪಡೆಯದೇ ಕಂಬ ಹತ್ತಿ, ದುರಸ್ತಿ ಮಾಡುವಾಗ ವಿದ್ಯುತ್ ಅವಗಢ ನಡೆಯಿತು. ಇದರಿಂದ ಯುವರಾಜ್ ತೀವ್ರವಾಗಿ ಗಾಯಗೊಂಡರು.
ವಿಜಯ್ ಕುಮಾರ್ ಅವರು ಘಟನೆಯನ್ನು ಮೆಸ್ಕಾಂನ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಗಾಯಾಳು ಯುವರಾಜ್ ಅನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ವಿಜಯ್ ಕುಮಾರ್ ಜೊತೆ ಮೆಸ್ಕಾಂ ಮೇಸ್ತ್ರಿ ನಂದೀಶ್ ಕೂಡ ಕೈಜೋಡಿಸಿದ್ದರು.ಗಾಯಾಳು ಯುವರಾಜ್ ನ ಚಿಕಿತ್ಸೆಗೆಂದು ಮೃತ ನಂದೀಶ್ ಸುಮಾರು ₹4.50 ಲಕ್ಷ ಖರ್ಚು ಮಾಡಿದ್ದರು. ಚಿಕಿತ್ಸೆಯ ಬಳಿಕ ಯುವರಾಜ್ ಕಡೆಯುವರು ಸುಮಾರು ₹25 ಲಕ್ಷ ಬೇಡಿಕೆ ಇಡುತ್ತಿದ್ದಾರೆ ಎಂದು ಯುವರಾಜ್ ಆತ್ಮಹತ್ಯೆಗೆ ಮುನ್ನ ಮಾಡಿರುವ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಘಟನೆ ನಡೆಯುವಾಗ ಎಲ್ ಸಿ ಸಿಕ್ಕಿರಲಿಲ್ಲ. ಅದಕ್ಕೂ ಮುನ್ನವೇ ಯುವರಾಜ್ ಅವರು ಕಂಬ ಹತ್ತಿ ಶಾಕ್ ಗೆ ಒಳಗಾಗಿ ಕೆಳಗೆ ಬಿದ್ದರು. ನಾನು ಮತ್ತು ಗುತ್ತಿಗೆದಾರ ವಿಜಯಕುಮಾರ್ ಸೇರಿ ಆಸ್ಪತ್ರೆಗೆ ಸೇರಿಸಿದೆವು. ನಾನು ಹಣ ನೀಡಿದೆ. ಅವರು ಚಿಕಿತ್ಸೆ ಕೊಡಿಸಿದರು. ಈ ಹಣ ಹೊಂದಿಸಲು ನಾನು ಒಡವೆ ಅಡವಿಡ್ಡಿದ್ದೇನೆ. ಇದಲ್ಲದೆ ಇನ್ನಷ್ಟು ಹೆಚ್ಚಿನ ಹಣ ನೀಡಲು ಬೇಡಿಕೆ ಇಟ್ಟಿದ್ದಾರೆ ಎಂದು ಕುಟುಂಬದ ಜೊತೆ ಮಾತನಾಡಿದ ಎಂಜಿನಿಯರರ್‌ಗಳು ಮತ್ತು ಗುತ್ತಿಗೆದಾರರು ತಿಳಿಸಿದಾಗ ನಾನು ಕಂಗಾಲಾದೆ.ಮತ್ತಷ್ಟು ಹಣಕೊಡದ ಹೊರತು ಯುವರಾಜ್ ನನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಗಾಯಾಳು ಯುವರಾಜ್ ಸಂಬಂಧಿಕರು ಪಟ್ಟು ಹಿಡಿದಿದ್ದರು. ಇನ್ನಷ್ಟು ಹಣ ಹೊಂದಿಸಲು ನನಗೆ ಸಾಧ್ಯವಿಲ್ಲ. ನನಗೆ ಬೇರೆ ದಾರಿ ಕಾಣುತ್ತಿಲ್ಲ. ಆತ್ಮಹತ್ಯೆಗೆ ವಿಜಯಕುಮಾರ್ ಕಾರಣರಲ್ಲ, ವಿದ್ಯುತ್ ಅವಗಢ ಕಾರಣ. ಬೇರೆ ದಾರಿ ಕಾಣದೆ ಈ ಮಾರ್ಗ ಹಿಡಿದಿದ್ದೇನೆ ಎಂದು ನಂದೀಶ್ ಅವರದ್ದು ಎನ್ನಲಾದ ಆಡಿಯೋದಲ್ಲಿ ಹೇಳಲಾಗಿದೆ.
ಘಟನೆ ಹಿನ್ನೆಲೆ ಕುಂಸಿ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ವಿಜಯ್ ಕುಮಾರ್, ಗಾಯಾಳು ಯುವರಾಜ್, ರವಿ, ಜಗದೀಶ್ ಹಾಗೂ ಯುವರಾಜ್ ಸಂಬಂಧಿಕರ ಮೇಲೆ ಎಫ್ ಐ ಆರ್ ದಾಖಲಾಗಿದೆ.