ಸಾರಾಂಶ
ಪುಟ್ಟ ಬಾಲಕಿಯಿಂದ ಹಿಡಿದು ಹಿರಿಯರು ಕೂಡ ತಮ್ಮ ಶ್ವಾನಗಳನ್ನು ಕರೆತಂದಿದ್ದರು. ಪ್ರತಿಯೊಂದು ಶ್ವಾನಗಳ ಗತ್ತು, ಬಿಂಕ ಬಿನ್ನಾಣ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿ ಉತ್ಸವ ಪ್ರಯುಕ್ತ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ಭಾನುವಾರ ಸಂಜೆ ಕದ್ರಿ ಉದ್ಯಾನವನದಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನ ಭಾರೀ ಜನಾಕರ್ಷಣೆಗೆ ಕಾರಣವಾಯಿತು.ವಿಶ್ವದ 20ಕ್ಕೂ ಅಧಿಕ ಜನಪ್ರಿಯ ಪ್ರಬೇಧಗಳ ಅಪರೂಪದ ಶ್ವಾನ ಪ್ರದರ್ಶನ ಇದಾಗಿದ್ದು, ವೀಕ್ಷಣೆಗೆ ನೂರಾರು ಶ್ವಾನಪ್ರಿಯರು ಆಗಮಿಸಿದ್ದರು.
ಜನಪ್ರಿಯ ಮತ್ತು ಅಪರೂಪದ ಶ್ವಾನ ತಳಿಗಳಾದ ಸೈಬೀರಿಯನ್ ಹಸ್ಕಿ, ಡಾಬರ್‌ಮನ್, ಮುಧೋಳ, ಜರ್ಮೆನ್ ಶೆಫರ್ಡ್, ಬೆಲ್ಜಿಯನ್ ಶೆಫರ್ಡ್, ರೋಟ್ ವೀಲರ್, ಬೀಗಲ್, ಬೆಲ್ಜಿಯನ್ ಮಲ್ಲಿನೋಯಿಸ್, ಪಗ್ ಇತ್ಯಾದಿ ನಾಯಿಗಳು ಬಾಲ ಅಲ್ಲಾಡಿಸುತ್ತಾ ಮಾಲೀಕರ ಜತೆ ಹೆಜ್ಜೆ ಹಾಕುತ್ತಿದ್ದರೆ ಅವುಗಳ ಜಾಣ್ಮೆ, ಬುದ್ಧಿಶಕ್ತಿಯನ್ನು ಶ್ವಾನ ಪ್ರಿಯರು ಕುತೂಹಲದಿಂದ ವೀಕ್ಷಿಸಿದರು.ಪುಟ್ಟ ಬಾಲಕಿಯಿಂದ ಹಿಡಿದು ಹಿರಿಯರು ಕೂಡ ತಮ್ಮ ಶ್ವಾನಗಳನ್ನು ಕರೆತಂದಿದ್ದರು. ಪ್ರತಿಯೊಂದು ಶ್ವಾನಗಳ ಗತ್ತು, ಬಿಂಕ ಬಿನ್ನಾಣ ಗಮನ ಸೆಳೆಯಿತು.ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪಶುಸಂಗೋಪನಾ ಇಲಾಖೆಯ ದಕ ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ, ಡಾ.ವಸಂತ ಕುಮಾರ್ ಶೆಟ್ಟಿ, ಡಾ.ಅಶೋಕ್ ಸಹಿತ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.