ಮರಿಯಾನೆ ಹಿಡಿದು ಕ್ಯಾಂಪ್‌ ಕಿತ್ತ ಅರಣ್ಯ ಇಲಾಖೆ

| Published : Jan 25 2024, 02:04 AM IST

ಸಾರಾಂಶ

ಹಲವು ದಶಕಗಳಿಂದ ಆಲೂರು, ಸಕಲೇಶಪುರ, ಬೇಲೂರು, ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾಗೂ ಮಾನವ ನಡುವಿನ ಸಂಘರ್ಷಕ್ಕೆ ಅರಣ್ಯ ಇಲಾಖೆಯವರ ಬೇಜವಾಬ್ದಾರಿ ತನದಿಂದಾಗಿ ಶಾಶ್ವತ ಅಥವಾ ತಾತ್ಕಾಲಿಕ ಪರಿಹಾರ ದೊರಕುವುದು ಕಷ್ಟವಾಗಿದೆ.

ಬಿಕ್ಕೋಡು ಬಳಿ ಹಾಕಲಾಗಿದ್ದ ಕ್ಯಾಂಪ್‌ ತೆರವು । ದೊಡ್ಡ ಆನೆಗಳನ್ನು ಹಿಡಿಯದ ಅರಣ್ಯ ಇಲಾಖೆ ಮೇಲೆ ಆಕ್ರೋಶ । ಶಾಶ್ವತ ಪರಿಹಾರಕ್ಕೆ ಆಗ್ರಹ

ರಾಘವೇಂದ್ರ ಎಚ್‌.ವಿ.

ಕನ್ನಡಪ್ರಭ ವಾರ್ತೆ ಆಲೂರು

ಹಲವು ದಶಕಗಳಿಂದ ಆಲೂರು, ಸಕಲೇಶಪುರ, ಬೇಲೂರು, ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಹಾಗೂ ಮಾನವ ನಡುವಿನ ಸಂಘರ್ಷಕ್ಕೆ ಅರಣ್ಯ ಇಲಾಖೆಯವರ ಬೇಜವಾಬ್ದಾರಿ ತನದಿಂದಾಗಿ ಶಾಶ್ವತ ಅಥವಾ ತಾತ್ಕಾಲಿಕ ಪರಿಹಾರ ದೊರಕುವುದು ಕಷ್ಟವಾದಂತೆ ಕಾಣುತ್ತಿದೆ.

ಏಕೆಂದರೆ ಪ್ರತಿ ಬಾರಿ ಈ ಭಾಗದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಯಾರಾದರೂ ಮರಣ ಹೊಂದಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಏಳೆಂಟು ಸಾಕಾನೆಗಳನ್ನು ತಂದು ಒಂದೆರಡು ಮರಿ ಆನೆಗಳನ್ನು ಹಿಡಿದು ಇಲ್ಲಿಂದ ಜಾಗ ಖಾಲಿ ಮಾಡಿ ಈ ಭಾಗದ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿರುವುದು ಮಾಮೂಲಾದಂತೆ ಕಾಣುತ್ತಿದೆ.

ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಶಾರ್ಪ್ ಶೂಟರ್ ವೆಂಕಟೇಶ್ ರವರು ಮರಣ ಹೊಂದಿದ ಸಂದರ್ಭದಲ್ಲಿ ಜನರ ಕಣ್ಣಿಗೆ ಮಣ್ಣೆರಚಲು ನಾಲ್ಕೈದು ಸಾಕಾನೆಗಳನ್ನು ತಂದು ಕಾಡಾನೆ ಹಿಡಿಯಲು ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ, ಹಲವು ಬಾರಿ ಮೈಸೂರು ದಸರಾ ಅಂಬಾರಿಯನ್ನು ಹೊತ್ತಂತಹ ಅರ್ಜುನ ಆನೆಯನ್ನು, ಬಲಿಷ್ಠ ಕಾಡಾನೆಯ ಬಳಿ ತಳ್ಳಿ ಬಲಿ ಪಡೆದಿದ್ದರು. ಈ ಸಂದರ್ಭದಲ್ಲಿ ಜನರು ರೊಚ್ಚಿಗೆದ್ದು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಯ ನಡೆಸಿದರು. ಆಗ ಶೀಘ್ರ ಕಾರ್ಯಾಚರಣೆ ನಡೆಸಿ ಈ ಭಾಗದಲ್ಲಿರುವ ಎಲ್ಲಾ ಒಂಟಿ ಸಲಗಗಳನ್ನು ಹಾಗೂ ಪುಂಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವುದಾಗಿ ಅರಣ್ಯ ಇಲಾಖೆ ಭರವಸೆ ನೀಡಿತ್ತು.

ಕಳೆದ ವಾರ 8 ಸಾಕಾಣಿಗಳನ್ನು ತಂದು ಬೇಲೂರು ತಾಲೂಕಿನ ಬಿಕ್ಕೋಡು ಬಳಿ ಇರುವ ಪ್ಲಾಂಟೇಶನ್‌ನಲ್ಲಿ ಆನೆ ಕ್ಯಾಂಪ್ ಮಾಡಿ, ಆಲೂರು ತಾಲೂಕಿನ ಪಾಳ್ಯ ಹೋಬಳಿ ಸಹರ ಫಾರೆಸ್ಟ್ ಬಳಿ ಒಂದು ಆನೆಯನ್ನು ಹಿಡಿದು, ನಂತರ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಅರಣ್ಯ ಪ್ರದೇಶದಲ್ಲಿ ಒಂದು ಮರಿಯಾನೆ ಹಾಗೂ ಇನ್ನೊಂದು ಚಿಕ್ಕ ಕುಳ್ಳಾನೆ ಹಿಡಿದು ಅಲ್ಲಿಂದ ಸ್ಥಳಾಂತರಿಸಿ ಒಂದು ವಾರ ಆನೆಗಳಿಗೆ ವಿಶ್ರಾಂತಿ ನೀಡಿ ಪುನಹ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದ ಅರಣ್ಯ ಇಲಾಖೆ ಜನರ ಕಣ್ಣಿಗೆ ಮಣ್ಣೆರಚಿ ಏಕಾಏಕಿ ಮಂಗಳವಾರ ಎಲ್ಲಾ ಸಾಕಾಣಿಗಳನ್ನು ಪುನ: ವಾಪಸ್ ದುಬಾರೆ ಮತ್ತಿತರ ಆನೆ ಕ್ಯಾಂಪ್‌ಗಳಿಗೆ ವಾಪಸ್ ಕಳುಹಿಸಿದ್ದಾರೆ

ಈ ರೀತಿ ಲಕ್ಷಾಂತರ ರುಪಾಯಿ ಹಣ ವೆಚ್ಚ ಮಾಡಿ, ಈ ಭಾಗದಲ್ಲಿ ಜನರಿಗೆ ತೊಂದರೆ ನೀಡುತ್ತಿರುವ ಒಂಟಿ ಸಲಗಗಳನ್ನು ಹಿಡಿದು ಸ್ಥಳಾಂತರಿಸುವುದನ್ನು ಬಿಟ್ಟು, ನಾಮಕಾವಸ್ತೆಗೆ ಒಂದೆರಡು ಮರಿಯಾನೆಗಳನ್ನು ಹಿಡಿದು ಜಾಗ ಖಾಲಿ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂಬುದು ಜನರ ಪ್ರಶ್ನೆಯಾಗಿದೆ.

ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೆ ಎಂಬುದು ಜನರು ತಿಳಿಯದಾಗಿದ್ದಾರೆ. ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ, ಅರಣ್ಯ ಇಲಾಖೆಯವರನ್ನು ಸುಮ್ಮನೆ ಬಿಡುತ್ತಾರೆಯೇ ಎಂಬುದು ಇದು ಅರಣ್ಯ ಇಲಾಖೆಯವರಿಗೆ ತಿಳಿಯದಾಗಿದೆ, ಈ ಬಗ್ಗೆ ಏಕೆ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಸಚಿವರು ತಲೆಕೆಡಿಸಿಕೊಳ್ಳುತ್ತಿಲ್ಲ, ಇವರು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆಯೇ? ಈ ಬಗ್ಗೆ ಏಕೆ ಈ ಭಾಗದ ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ.

ಪ್ರತಿ ಬಾರಿ ಏನಾದರೂ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಜನರಿಗೆ ಪೊಳ್ಳು ಭರವಸೆ ನೀಡಿ ಮಂಕು ಬೂದಿ ಎರಚಿ ಇಲ್ಲಿಂದ ಜಾಗ ಖಾಲಿ ಮಾಡುತ್ತಿರುವ ಇವರಿಗೆ ನಿಜವಾಗಲೂ ಈ ಭಾಗದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲು ಸಾಧ್ಯವೇ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಕಾಫಿ ಬೆಳಗಾರ ತನು ಗೌಡ ಕುಂದುರ್, ಪ್ರತಿ ಬಾರಿಯೂ ಅರಣ್ಯ ಇಲಾಖೆಯವರು ಇದೇ ರೀತಿ ಜನರ ಕಣ್ಣಿಗೆ ಮಣ್ಣೆರಚು ತ್ತಿದ್ದಾರೆ.ಈ ಭಾಗದ ಜನರಿಗೆ ಕಂಟಕಪ್ರಾಯವಾಗಿರುವ ಹಾಗೂ ಅರ್ಜುನ ಆನೆಯನ್ನು ಬಲಿಪಡದ, ಬಲಿಷ್ಠವಾದ ಒಂಟಿ ಸಲಗವನ್ನು ಹಿಡಿಯುವುದನ್ನು ಬಿಟ್ಟು ಯಾವುದೋ ಮರಿಯಾನೆಯನ್ನು ಹಿಡಿದುಕೊಂಡು, ಅರಣ್ಯ ಇಲಾಖೆಯವರು ನಾಟಕವಾಡುತ್ತಿದ್ದಾರೆ. ಅರಣ್ಯ ಸಚಿವರು ಏಕೆ ಈ ಭಾಗದ ಸಮಸ್ಯೆಗೆ ಹೆಚ್ಚಿನ ಹೊತ್ತು ನೀಡುತ್ತಿಲ್ಲ ಎಂಬುದು ತಿಳಿಯದಾಗಿದೆ, ಈ ಭಾಗದಲ್ಲಿ ಶಾಶ್ವತ ಕ್ಯಾಂಪ್ ಸ್ಥಾಪಿಸಿ, ಮೊದಲು ಈ ಭಾಗದಲ್ಲಿರುವ ಎಲ್ಲಾ ಗಂಡಾನೆಗಳನ್ನು ಹಿಡಿದು ಸ್ಥಳಾಂತರಿಸಿ, ಹಂತ ಹಂತವಾಗಿ ಎಲ್ಲಾ ಆನೆಗಳನ್ನು ಹಿಡಿದು ಬೇರೆಡೆಗೆ ರವಾನಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.ಲಾರಿ ಏರಿಸಿ ಸಾಕಾನೆಗಳನ್ನು ಕ್ಯಾಂಪಿಗೆ ವಾಪಸ್‌ ಕಳುಹಿಸುತ್ತಿರುವುದು.