ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಕ್ಸೊ ಕಾಯಿದೆ ಜಾರಿಯಲ್ಲಿದೆ. ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳು ಮತ್ತು ಕಾನೂನು ರಕ್ಷಣೆಯ ಬಗ್ಗೆ ತಿಳಿದುಕೊಳ್ಳಬೇಕು.

ಕುಷ್ಟಗಿ: ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿದ್ಯಾರ್ಥಿನಿಯರು ಎಚ್ಚರಿಕೆ ವಹಿಸಬೇಕು. ಅಪರಿಚಿತರೊಂದಿಗೆ ಅನಗತ್ಯ ಸಂಪರ್ಕ, ವೈಯಕ್ತಿಕ ಮಾಹಿತಿ ಹಾಗೂ ಛಾಯಾಚಿತ್ರಗಳ ಹಂಚಿಕೆ ಅಪಾಯಕ್ಕೆ ಕಾರಣವಾಗಬಹುದು. ಯಾವುದೇ ರೀತಿಯ ಕಿರುಕುಳ, ದೌರ್ಜನ್ಯ ಅಥವಾ ಆನ್‌ಲೈನ್ ಬೆದರಿಕೆ ಎದುರಾದರೆ ಭಯಪಡದೆ ತಕ್ಷಣ ಪೋಷಕರು, ಶಿಕ್ಷಕರು ಅಥವಾ ಪೊಲೀಸರ ಗಮನಕ್ಕೆ ತರಬೇಕು ಎಂದು ಕುಷ್ಟಗಿ ಸಿಪಿಐ ವಿಶ್ವನಾಥ ಹಿರೇಗೌಡರ್‌ ಹೇಳಿದರು.

ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಸಾಮಾಜಿಕ ಜಾಲತಾಣಗಳಿಂದ ಉಂಟಾಗಬಹುದಾದ ಅಪರಾಧಗಳು, ಪೋಕ್ಸೊ ಕಾಯಿದೆಯ ಮಹತ್ವ, ಕಾನೂನಿನ ರಕ್ಷಣೆ ಹಾಗೂ ವೈಯಕ್ತಿಕ ಸುರಕ್ಷತೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಪೋಕ್ಸೊ ಕಾಯಿದೆ ಜಾರಿಯಲ್ಲಿದೆ. ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳು ಮತ್ತು ಕಾನೂನು ರಕ್ಷಣೆಯ ಬಗ್ಗೆ ತಿಳಿದುಕೊಳ್ಳಬೇಕು. ಯಾವುದೇ ಸಮಸ್ಯೆಯನ್ನು ಮುಚ್ಚಿಡದೆ ಧೈರ್ಯದಿಂದ ಹೇಳಿಕೊಳ್ಳಬೇಕು. ಪೊಲೀಸರ ನೆರವು ಪಡೆಯಲು ಹಿಂಜರಿಯಬಾರದು. ಕಾನೂನಿನ ಅರಿವು ಅಪರಾಧಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಶಿಕ್ಷಕ ನಟರಾಜ ಸೋನಾರ್ ಮಾತನಾಡಿ, ವಿದ್ಯಾರ್ಥಿನಿಯರು ಶಿಕ್ಷಣದ ಜತೆಗೆ ನೈತಿಕ ಶಕ್ತಿ, ಸ್ವಂತ ಧೈರ್ಯ ಹಾಗೂ ಮಾನಸಿಕ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆಮಿಷಗಳು, ವಂಚನೆ ಮತ್ತು ಬೆದರಿಕೆಗಳಿಗೆ ಒಳಗಾಗಬಾರದು. ಅಪರಿಚಿತರು ಕಳುಹಿಸುವ ಸಂದೇಶಗಳು, ಲಿಂಕ್‌ಗಳು ಹಾಗೂ ವೈಯಕ್ತಿಕ ಮಾಹಿತಿ ಕೇಳುವ ಪ್ರಯತ್ನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ಕಿರುಕುಳ ಎದುರಾದಾಗ ಮೌನವಾಗಿರದೆ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಬೇಕು ಎಂದು ವಿವಿಧ ಉದಾಹರಣೆಗಳ ಮೂಲಕ ವಿವರಿಸಿ ಜಾಗೃತಿ ಮೂಡಿಸಿದರು.

ಪಿಎಸ್‌ಐ ಹನುಮಂತಪ್ಪ ತಳವಾರ ಮಾತನಾಡಿದರು. ಪೊಲೀಸ್‌ ಸಿಬ್ಬಂದಿ ಮುತ್ತಮ್ಮ, ಮಲ್ಲಪ್ಪ ಎಂ., ಬಸವರಾಜ, ವಸತಿ ನಿಲಯದ ಸಿಬ್ಬಂದಿ ಶ್ರೀದೇವಿ ಮಾಲಿಪಾಟೀಲ, ಅಡುಗೆ ಸಿಬ್ಬಂದಿ ಹಾಗೂ ಸಮಾಜದ ಮುಖಂಡ ಬಸವರಾಜ ನಾಯಕ್ ಉಪಸ್ಥಿತರಿದ್ದರು.