ಕಾವೇರಿ ಪ್ರವಾಹ: ಕುಶಾಲನಗರ ತಗ್ಗು ಪ್ರದೇಶ ಜಲಕಂಟಕ

| Published : Aug 01 2024, 12:24 AM IST

ಸಾರಾಂಶ

ಕಾವೇರಿ ಪ್ರವಾಹದಿಂದ ಜಲ ಕಂಟಕಕ್ಕೆ ಸಿಲುಕಿದ ಕುಶಾಲನಗರದ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರು ಆವರಿಸಿದ್ದು, ಕಾವೇರಿಯಲ್ಲಿ ಪ್ರವಾಹ ಇನ್ನೂ ಕಡಿಮೆಯಾಗಿಲ್ಲ. ಮಂಗಳವಾರ ಸಂಜೆ ವೇಳೆಗೆ ಕುಶಾಲನಗರದ ಸಾಯಿ ಬಡಾವಣೆ ಮತ್ತು ಬಸಪ್ಪ ಬಡಾವಣೆಗಳಿಗೆ ನೀರು ನುಗ್ಗಿದ್ದು ಸುಮಾರು 25ಕ್ಕೂ ಅಧಿಕ ಕುಟುಂಬ ಸದಸ್ಯರು ಮನೆಯಿಂದ ಸ್ಥಳಾಂತರಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕಾವೇರಿ ಪ್ರವಾಹದಿಂದ ಜಲ ಕಂಟಕಕ್ಕೆ ಸಿಲುಕಿದ ಕುಶಾಲನಗರದ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನೀರು ಆವರಿಸಿದ್ದು, ಕಾವೇರಿಯಲ್ಲಿ ಪ್ರವಾಹ ಇನ್ನೂ ಕಡಿಮೆಯಾಗಿಲ್ಲ.

ಮಂಗಳವಾರ ಸಂಜೆ ವೇಳೆಗೆ ಕುಶಾಲನಗರದ ಸಾಯಿ ಬಡಾವಣೆ ಮತ್ತು ಬಸಪ್ಪ ಬಡಾವಣೆಗಳಿಗೆ ನೀರು ನುಗ್ಗಿದ್ದು ಸುಮಾರು 25ಕ್ಕೂ ಅಧಿಕ ಕುಟುಂಬ ಸದಸ್ಯರು ಮನೆಯಿಂದ ಸ್ಥಳಾಂತರಗೊಂಡಿದ್ದಾರೆ.

ಬಡಾವಣೆಯಲ್ಲಿ 3-4 ಅಡಿಗಳಷ್ಟು ನೀರು ನಿಂತಿದ್ದು ಬಹುತೇಕ ಮನೆಗಳು ಭಾಗಶಃ ಜಲಾವೃತಗೊಂಡಿವೆ.

ಹಾರಂಗಿ ಅಣೆಕಟ್ಟಿನಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಮಾಡಿದ ಸಂದರ್ಭ ಕಾವೇರಿ ಹರಿವು ಸ್ಥಗಿತಗೊಂಡು ತಗ್ಗು ಪ್ರದೇಶಗಳ ಬಡಾವಣೆಗೆ ನೀರು ನುಗ್ಗಲು ಕಾರಣವಾಗಿದೆ. ಸಾಯಿ ಬಡಾವಣೆಯಲ್ಲಿರುವ ಸಾಯಿ ದೇವಸ್ಥಾನ ಬಹುತೇಕ ಜಲಾವೃತಗೊಂಡಿದೆ.

ಕುಶಾಲನಗರ ಪಟ್ಟಣದ ಬಹುತೇಕ ಬಡಾವಣೆಗಳ ಚರಂಡಿ ನೀರು ಬಡಾವಣೆಯ ರಾಜಕಾಲುವೆ ಮೂಲಕ ಹರಿಯುತ್ತಿರುವುದು ಇಲ್ಲಿನ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ಅಧಿಕಾರಿಗಳು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ಇಂದಿರಾ ಬಡಾವಣೆ ಗೆ ಪ್ರವಾಹ ನೀರು ನುಗ್ಗಿದ್ದು ಒಂದು ಮನೆಯ ಕುಟುಂಬ ಸದಸ್ಯರು ಸ್ಥಳಾಂತರಗೊಂಡಿದ್ದಾರೆ.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಇನ್ನೂ ಅಪಾಯದ ಹಂತ ಮೀರಿ ಹರಿಯುತ್ತಿದೆ.

ಕುಶಾಲನಗರ ಸಮೀಪದ ಕೊಪ್ಪ ಗ್ರಾಮಗಳಲ್ಲಿ ಸಂಪರ್ಕ ರಸ್ತೆಗಳು ಜಲಾವೃತಗೊಂಡು ಸಂಚಾರ ವ್ಯವಸ್ಥೆಗೆ ತೊಡಕುಂಟಾಗಿದೆ. ಪಶುಸಂಗೋಪನಾ ಸಚಿವ ಕೆ. ವೆಂಕಟೇಶ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.