ಸಾರಾಂಶ
ಎಚ್.ಎನ್.ಪ್ರಸಾದ್
ಹಲಗೂರು : ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳಿಂದ ಹೆಚ್ಚಿನ ನೀರನ್ನು ಕಾವೇರಿ ನದಿಗೆ ಬಿಟ್ಟಿದ್ದ ಹಿನ್ನೆಲೆಯಲ್ಲಿ ನಿಷೇಧ ಹೇರಿದ್ದ ಪ್ರವಾಸಿ ತಾಣ ಮುತ್ತತ್ತಿಗೆ ಮಂಗಳವಾರದಿಂದ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.
ಕಾವೇರಿ ನದಿಯಲ್ಲಿ ನೀರು ಹೆಚ್ಚು ಪ್ರಮಾಣದಲ್ಲಿ ಹರಿದು ಹೋಗುತ್ತಿದ್ದರಿಂದ ಮುಂಜಾಗ್ರತ ಕ್ರಮವಾಗಿ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಜುಲೈ 26 ರಿಂದ ಮುತ್ತತ್ತಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು.
ಈಗ ಮಳೆ ಪ್ರಮಾಣ ಕಡಿಮೆ ಆಗಿ ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳಿಂದ ಕಡಿಮೆ ನೀರು ಬಿಟ್ಟಿರುವುದರಿಂದ ಪ್ರವಾಸಿಗರ ಪ್ರವೇಶಕ್ಕೆ ನೀಡಿದ್ದ ನಿಷೇಧವನ್ನು ತೆರವುಗೊಳಿಸಿ ತಾಲೂಕು ದಂಡಾಧಿಕಾರಿ ಲೋಕೇಶ್ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಮತ್ತೊಂದು ಪ್ರವಾಸಿ ತಾಣ ಭೀಮೇಶ್ವರದಲ್ಲಿರುವ ಕಾವೇರಿ ಫಿಶಿಂಗ್ ಕ್ಯಾಂಪಿಗೂ ಪ್ರವೇಶ ಅವಕಾಶ ನೀಡಲಾಗಿದೆ.
ಶ್ರಾವಣ ಮಾಸ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಹೆಚ್ಚು ಭಕ್ತರು ಮುತ್ತತ್ತಿರಾಯನ ದರ್ಶನಕ್ಕೆ ಬರುತ್ತಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಆಗಸ್ಟ್ 6ರಿಂದ ಮುತ್ತತ್ತಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಪ್ರವಾಸಿಗರು ಕಾವೇರಿ ನದಿ ಬಳಿ ತೆರಳಿ ನೀರಿನಲ್ಲಿ ಈಜಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳು:
ಮುತ್ತತ್ತಿ ಪ್ರವಾಸಿ ತಾಣವಾಗಿದ್ದು, ಮುತ್ತತ್ತಿ ರಾಯನ ಭಕ್ತರು ರಾಜ್ಯಾದ್ಯಂತ ಇದ್ದಾರೆ. ನಿತ್ಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಪ್ರವಾಸಿಗರನ್ನೇ ನಂಬಿ ಅನೇಕ ಕುಟುಂಬಗಳು ಜೀವನ ಸಾಗಿಸುತ್ತಿದ್ದವು.
ಆದರೆ, ಕೆಆರ್‌ಎಸ್- ಕಬಿನಿ ಜಲಾಶಯಗಳಿಂದ 2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಬಿಟ್ಟ ಪರಿಣಾಮ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಇದರಿಂದ ವ್ಯಾಪಾರವನ್ನೇ ನಂಬಿ ಬದುಕು ನಡೆಸುತ್ತಿದ್ದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು.
ಮುತ್ತತ್ತಿ ಭಾಗದಲ್ಲಿ ಹೆಚ್ಚು ಗಿರಿಜನರೇ ವಾಸ ಮಾಡುತ್ತಿದ್ದು, ಜೀವನೋಪಾಯಕ್ಕೆ ಬೇರೆ ಕಡೆ ಹೋಗಲು ಸಾಧ್ಯವಾಗದೇ ಕಳೆದ 15 ದಿನಗಳಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಅಲ್ಲದೇ, ಈ ಭಾಗದ ಹಲವು ಜನರಿಗೆ ವ್ಯವಸಾಯಕ್ಕೆ ಜಮೀನುಗಳಿಲ್ಲ. ಇಲ್ಲಿರುವ ಸುಮಾರು 40 ರಿಂದ 50 ಕುಟುಂಬಗಳು ವ್ಯಾಪಾರವನ್ನೇ ನಂಬಿಕೊಂಡಿದ್ದರು. ಮುತ್ತತ್ತಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಹಾಗೂ ಪ್ರವಾಸಿಗರಿಂದ ಅವರ ಜೀವನ ಸಾಗುತ್ತಿತ್ತು.
ಗ್ರಾಮಸ್ಥರಿಗೆ ಸಾಮಗ್ರಿ ವಿತರಣೆ:
ಕೆಲಸವು ಇಲ್ಲದೆ, ಗ್ರಾಮದಿಂದ ಹೊರ ಹೋಗಲು ಆಗದೇ ತೊಂದರೆಗೊಳಗಾಗಿದ್ದ ಗ್ರಾಮದಲ್ಲಿ ವಾಸ ಮಾಡುತ್ತಿರುವ ಸೋಲಿಗರ ಕುಟುಂಬಕ್ಕೆ ತಹಸೀಲ್ದಾರ್ ಲೋಕೇಶ್ ಹಾಗೂ ಆರ್ ಐ ಮಧುಸೂದನ್ , ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಗ್ರಾಮದ ಮುಖಂಡರು ದಿನನಿತ್ಯ ಮನೆಗೆ ಬೇಕಾದ ಅಗತ್ಯ ಅಕ್ಕಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಿತರಿಸುತ್ತಿದ್ದರು. ಇದಕ್ಕೆ ಮುಖಂಡರಾದ ವೆಂಕಟಮುತ್ತು ,ಕುಮಾರ, ಹನುಮಂತು ,ಯೋಗೇಶ , ನಿಖಿಲ್, ದೇವರಾಜು ಸೇರಿದಂತೆ ಇತರರು ಸಹಕಾರ ನೀಡುತ್ತಿದ್ದರು.
ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ತೆಪ್ಪದ ವ್ಯವಸ್ಥೆ:
ಗ್ರಾಮದಿಂದ ಶಾಲಾ ಕಾಲೇಜುಗಳಿಗೆ ಸುಮಾರು 15 ವಿದ್ಯಾರ್ಥಿಗಳು ಹಲಗೂರು ಮತ್ತು ಮಳವಳ್ಳಿ ವ್ಯಾಸಂಗಕ್ಕೆ ಹೋಗುತ್ತಿದ್ದರು. ಅವರಿಗೆ ಕೆಸರಕ್ಕಿ ಹಳ್ಳ ಕಾವೇರಿ ನದಿ ನೀರಿನಿಂದ ಜಲಾವೃತವಾಗಿದ್ದರಿಂದ ಕಾವೇರಿ ಫಿಶಿಂಗ್ ಕ್ಯಾಂಪಿನ ಸಿಬ್ಬಂದಿ ತೆಪ್ಪದ ವ್ಯವಸ್ಥೆ ಮೂಲಕ ನಿತ್ಯ ವಿದ್ಯಾರ್ಥಿಗಳನ್ನು ಕೆಸರಕ್ಕಿ ಹಳ್ಳದ ಸೇತುವೆಯ ದಡದಿಂದ ಆಚೆ ಬಿಡುವುದು, ಗ್ರಾಮಕ್ಕೆ ಸಾಗಿಸುವ ಕೆಲಸ ಮಾಡುತ್ತಿದ್ದರು.
ಮುತ್ತತ್ತಿರಾಯ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಇದರಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತದೆ. ಈಗ 15 ದಿನಗಳಿಂದ ಭಕ್ತರಿಲ್ಲದೆ ದೇವಸ್ಥಾನ ಬಣಗುಟ್ಟುತ್ತಿತ್ತು. ಕೆಸರಕ್ಕಿಹಳ್ಳದ ಸೇತುವೆ ನೀರಿನಿಂದ ಜಲಾವೃತವಾಗಿ ಗ್ರಾಮಸ್ಥರಿಗೂ ತೊಂದರೆಯಾಗಿತ್ತು. ಈಗ ಕಾವೇರಿ ನದಿ ನೀರಿನ ಪ್ರಮಾಣ ಇಳಿಮುಖವಾಗಿರುವುದರಿಂದ ಆದಷ್ಟು ಬೇಗ ಕೆಸರಕ್ಕಿ ಹಳ್ಳದ ಸೇತುವೆ ಎತ್ತರಿಸಿ ಸ್ಥಳೀಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ. ಮುತ್ತತ್ತಿರಾಯ ದೇವಸ್ಥಾನವು ರಾಜ್ಯದಲ್ಲೇ ಹೆಸರುವಾಸಿ. ಶ್ರಾವಣ ಮಾಸದಲ್ಲಿ ಹೆಚ್ಚು ಭಕ್ತರು ಇಲ್ಲಿಗೆ ಬರುತ್ತಾರೆ. ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ ಮತ್ತೆ ಮುತ್ತತ್ತಿಗೆ ಪ್ರವೇಶ ನೀಡಿರುವುದು ಸ್ವಾಗತಾರ್ಹ. ಸ್ಥಳೀಯ ಶಾಸಕರು, ಅಧಿಕಾರಿಗಳು ಆದಷ್ಟು ಬೇಗ ಕೆಸರಕ್ಕಿ ಹಳ್ಳದ ಸೇತುವೆ ಎತ್ತರಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು.
- ರವಿ, ಗ್ರಾಪಂ ಸದಸ್ಯರು
ತಾಲೂಕು ಆಡಳಿತ ನಿರ್ದೇಶನದಂತೆ ಕಾವೇರಿ ಫಿಶಿಂಗ್ ಕ್ಯಾಂಪಿನಲ್ಲಿ 15 ದಿನಗಳಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಕ್ಯಾಂಪಿನಲ್ಲಿ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಅವಕಾಶ ನೀಡಿರಲಿಲ್ಲ. ಇಂದಿನಿಂದ ಮತ್ತೆ ಪ್ರವೇಶಕ್ಕೆ ಆದೇಶ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಬರುವ ಪ್ರವಾಸಿಗರಿಗೆ ವ್ಯವಸ್ಥೆ ಮಾಡಲಾಗುವುದು.
- ಲೋಕೇಶ್ , ಕಾವೇರಿ ಫಿಶಿಂಗ್ ಕ್ಯಾಂಪಿನ ವ್ಯವಸ್ಥಾಪಕ