ಸಾರಾಂಶ
ನಮ್ಮ ಕ್ಷೇತ್ರದಲ್ಲಿ ಕೇವಲ ಪ್ರವಾಹ ಹಾನಿ ಮಾತ್ರವಲ್ಲದೇ ಕೃಷಿ, ತೋಟಗಾರಿಕೆಯಲ್ಲೂ ವಿಪರೀತ ಹಾನಿ, ರೋಗ ಬಾಧಿಸಿದೆ. ಇದಕ್ಕೆ ತುರ್ತಾಗಿ ವಿಶೇಷ ಪರಿಹಾರ ನೀಡಿದರೆ ಮಾತ್ರ ರೈತರು ಸ್ವಲ್ಪವಾದರೂ ಚೇತರಿಸಿಕೊಳ್ಳಲು ಸಾಧ್ಯ.
ಕುಮಟಾ: ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅತಿವೃಷ್ಟಿ ಸಮಸ್ಯೆಯಿಂದ ನಲುಗಿದ ಬಡವರಿಗೆ ಕನಿಷ್ಠ ಪರಿಹಾರವನ್ನೂ ನೀಡಲಾಗದಷ್ಟು ಅವ್ಯವಸ್ಥೆಯ ಆಗರವಾಗಿದೆ. ಕಳೆದ ಒಂದು ತಿಂಗಳಿಂದ ಮಳೆಯ ಪ್ರಕೋಪಕ್ಕೆ ಸಂತ್ರಸ್ತರಾಗಿರುವ ಜನರು ಅನುಭವಿಸಿದ ಹಾನಿಗೆ ಪರಿಹಾರ ಇಲ್ಲದಂತಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಖೇದ ವ್ಯಕ್ತಪಡಿಸಿದರು.
ತಾಲೂಕು ಸೌಧಕ್ಕೆ ಸೋಮವಾರ ಭೇಟಿ ನೀಡಿ ವಿವಿಧ ವಿಭಾಗಗಳ ಕಾರ್ಯವೈಖರಿಯನ್ನು ಪರಿಶೀಲಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ತಹಸೀಲ್ದಾರ್ ವರ್ಗಾವಣೆ ಬಳಿಕ ಬೇರೆ ಕಡೆಯಿಂದ ಕಾಯಂ ತಹಸೀಲ್ದಾರ್ ತರಲು ಸರ್ಕಾರಕ್ಕೆ ಆಗುತ್ತಿಲ್ಲ. ತಹಸೀಲ್ದಾರ್ ಇಲ್ಲದೇ ಇರುವ ಕಾರಣದಿಂದಲೇ ಯಾವುದೇ ಪರಿಹಾರ ನೀಡಲು ಆಗುತ್ತಿಲ್ಲ. ಮೊದಲಿಗೆ ಮಳೆ, ಪ್ರವಾಹದಿಂದ ಹಾನಿ ಅನುಭವಿಸಿದವರಲ್ಲಿ ಕೇವಲ ೩೪ ಫಲಾನುಭವಿ ಕುಟುಂಬಕ್ಕೆ ಮಾತ್ರ ತಲಾ ₹೫೦೦೦ ಪರಿಹಾರ ಕೊಡಲಾಗಿದೆ. ಇನ್ನುಳಿದ ನೂರಾರು ಸಂತ್ರಸ್ತರಿಗೆ ಏನೂ ನೀಡಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ೨ ವರ್ಷ ತೀವ್ರ ಪ್ರವಾಹ, ಅತಿವೃಷ್ಟಿ ಎದುರಿಸಿದರೂ ಮನೆಗೆ ನೀರು ಹೊಕ್ಕರೂ ತಲಾ ₹೧೦ ಸಾವಿರ ಪರಿಹಾರ ನೀಡಲಾಗಿತ್ತು. ಎರಡು ವರ್ಷದಲ್ಲಿ ೬೦೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಪರಿಹಾರ ನೀಡಿದ್ದೇವೆ. ಭಾಗಶಃ ಮನೆ ಹಾನಿಗೆ ₹೯೫ ಸಾವಿರ ಹಾಗೂ ಪೂರ್ಣ ಮನೆಹಾನಿಗೆ ₹೫ ಲಕ್ಷ ನೀಡಿದ್ದೇವೆ. ಆದರೆ ಈಗಿನ ಸರ್ಕಾರ ಎತ್ತ ಸಾಗುತ್ತಿದೆ? ನಿಜಕ್ಕೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಗೆದ್ದು ಸರ್ಕಾರ ಮಾಡಿ ಏನು ದಂಡು ಕಡಿದಿದೆ ಎಂದು ಕೇಳಬೇಕಾಗಿದೆ ಎಂದರು.ನಮ್ಮ ಕ್ಷೇತ್ರದಲ್ಲಿ ಕೇವಲ ಪ್ರವಾಹ ಹಾನಿ ಮಾತ್ರವಲ್ಲದೇ ಕೃಷಿ, ತೋಟಗಾರಿಕೆಯಲ್ಲೂ ವಿಪರೀತ ಹಾನಿ, ರೋಗ ಬಾಧಿಸಿದೆ. ಇದಕ್ಕೆ ತುರ್ತಾಗಿ ವಿಶೇಷ ಪರಿಹಾರ ನೀಡಿದರೆ ಮಾತ್ರ ರೈತರು ಸ್ವಲ್ಪವಾದರೂ ಚೇತರಿಸಿಕೊಳ್ಳಲು ಸಾಧ್ಯ. ಈ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದರು.
ತಾಲೂಕು ಸೌಧದಲ್ಲಿ ಆಧಾರ ವಿಭಾಗ ಪುನಃ ಕಾರ್ಯಾರಂಭಕ್ಕೆ ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದು ಸರಿಪಡಿಸಿದ್ದೇನೆ. ಆಹಾರ ವಿಭಾಗದಲ್ಲೂ ತೊಡಕು ನಿವಾರಿಸಿದ್ದು, ಜನರ ಕೆಲಸ ಕಾರ್ಯಗಳಾಗುತ್ತಿದೆ ಎಂದರು.