ಸಾರಾಂಶ
ಶ್ರಾವಣ ಹಬ್ಬದ ನಿಮಿತ್ತ ಬಟ್ಟೆಯನ್ನು ತೊಳೆಯಲು ಹೋಗಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಭಾನುವಾರ ಮುಳುಗಿರುವ ಘಟನೆ ಮಲ್ಲಾ (ಬಿ) ಗ್ರಾಮದಲ್ಲಿ ಸಂಭವಿಸಿದ್ದು, ಮೃತದೇಹಕ್ಕಾಗಿ ಸೋಮವಾರ ಶೋಧ ಕಾರ್ಯ ಮುಂದುವರಿದಿದೆ.
ಕನ್ನಡಪ್ರಭ ವಾರ್ತೆ ಸುರಪುರ
ಶ್ರಾವಣ ಹಬ್ಬದ ನಿಮಿತ್ತ ಬಟ್ಟೆಯನ್ನು ತೊಳೆಯಲು ಹೋಗಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಭಾನುವಾರ ಮುಳುಗಿರುವ ಘಟನೆ ಮಲ್ಲಾ (ಬಿ) ಗ್ರಾಮದಲ್ಲಿ ಸಂಭವಿಸಿದ್ದು, ಮೃತದೇಹಕ್ಕಾಗಿ ಸೋಮವಾರ ಶೋಧ ಕಾರ್ಯ ಮುಂದುವರಿದಿದೆ. ಮಲ್ಲಾ (ಬಿ) ಗ್ರಾಮದ ದತ್ತಪ್ಪ (40) ನೀರಿನಲ್ಲಿ ಮುಳುಗಿ ಮೃತಪಟ್ಟವರೆಂದು ಗುರುತಿಸಲಾಗಿದೆ. ಭಾನುವಾರ ಆರಂಭವಾದ ಮೃತದೇಹದ ಶೋಧ ಕಾರ್ಯ ಸೋಮವಾರವೂ ಮುಂದುವರೆದಿದ್ದು ಶವ ದೊರೆತಿಲ್ಲ. ಇದರಿಂದ ಭಯಭೀತಗೊಂಡ ಗ್ರಾಮಸ್ಥರು ಮತ್ತು ಅಧಿಕಾರಿಗಳು ಕೆರೆಯ ನೀರನ್ನು ಐದು ನೀರೆತ್ತುವ ಮೋಟಾರ್‌ಗಳನ್ನು ಇಟ್ಟು ಖಾಲಿ ಮಾಡುತ್ತಿದ್ದಾರೆ. ಕೆರೆ ನೀರು ಖಾಲಿ ಮಾಡಿ ಗ್ರಾಮಸ್ಥರು ಮತ್ತು ಈಜು ತಜ್ಞರು ಮೃತದೇಹ ಹುಡುಕಾಟ ನಡೆಸಿದರೂ ದೊರೆತಿಲ್ಲ. ಈ ಕುರಿತು ಮಾಹಿತಿ ನೀಡಿದರೂ ಅಧಿಕಾರಿಗಳು ಬಾರದಿರುವ ಬಗ್ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್ ಕೆ. ವಿಜಯಕುಮಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. "ಕನ್ನಡಪ್ರಭ "ದೊಂದಿಗೆ ಮಾತನಾಡಿದ ತಹಸೀಲ್ದಾರ್ ಕೆ. ವಿಜಯಕುಮಾರ, ಸಾಲಬಾಧೆ, ಮಾನಸಿಕ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತದೇಹ ದೊರೆಯದಿದ್ದ ಪಕ್ಷದಲ್ಲಿ ಮಂಗಳವಾರವೂ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.