ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಅವರು ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎತ್ತಿನಹೊಳೆ, ಕಾವೇರಿ ನೀರು ಹಾಗೂ ಮೆಟ್ರೋ ಸಂಪರ್ಕ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.ಇಲ್ಲಿನ ಅಂಬಿಕಾ ಲೇಔಟ್‌ನಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವತಿಯಿಂದ 6.45 ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ ಬಯಪದ ನೂತನ ಕಚೇರಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ, ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಅವರು ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ. ಎತ್ತಿನಹೊಳೆ, ಕಾವೇರಿ ನೀರನ್ನು ಈ ಭಾಗಕ್ಕೆ ಕೊಡಲೇಬೇಕು ಬೇಡಿಕೆ ಇಟ್ಟಿದ್ದಾರೆ. ಎಲ್ಲಾ ಸಂಪುಟ ಸಭೆಯಲ್ಲೂ ಕೂಡ ನೀರಿಗಾಗಿ ಮುನಿಯಪ್ಪ ಒತ್ತಡ ಹಾಕುತ್ತಿದ್ದಾರೆ. ಅವರ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಲಾಗುತ್ತದೆ ಎಂದರು.

ನಾನು ನೀರಾವರಿ ಸಚಿವ ಆದ ನಂತರ ಬೆಂಗಳೂರಿಗೆ 6 ಟಿಎಂಸಿ ನೀರನ್ನು ಪ್ರತ್ಯೇಕವಾಗಿ ಇಡಲು ನಾನು ಹೊಸ ಸರ್ಕಾರಿ ಆದೇಶ ಮಾಡಿದ್ದೇನೆ. 2002 ರಿಂದ 2004 ರಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ ರಚನೆಗೆ ಸಹಿ ಮಾಡಿದೆ. ಬಿಡದಿಯಲ್ಲಿ ಅಥವಾ ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಆಗಬೇಕಾ ಎಂಬ ಚರ್ಚೆ ಆಗುತ್ತಿತ್ತು. ಆಗ ಮುಖಂಡರಾದ ಮುನನರಸಿಂಹಯ್ಯ, ರಾಮಯ್ಯ, ಬಚ್ಚೇಗೌಡ ಅವರು ಈ ಭಾಗದ ರೈತರನ್ನು ಒಪ್ಪಿಸಿ, ಇಲ್ಲಿ ಏರ್ಫೋಟ್ ಆಗಬೇಕು ಎಂದು ತೀರ್ಮಾನಿಸಲಾಯಿತು ಎಂದರು.

ದೇವನಹಳ್ಳಿಯಲ್ಲಿ 2400 ಎಕರೆಯನ್ನು ಭೂಸ್ವಾಧೀನ ಮಾಡಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಇದಕ್ಕೆ ವಾಜಪೇಯಿ ಅವರನ್ನು ಕರೆದುಕೊಂಡು ಬಂದು ವಿಧಾನಸೌಧದಲ್ಲಿ ಭೂಮಿಪೂಜೆ ಮಾಡಲಾಯಿತು. ಈ ವಿಮಾನ ನಿಲ್ದಾಣದಿಂದ ಎಷ್ಟು ಜನರಿಗೆ ಉದ್ಯೋಗ ದೊರೆತಿದೆ, ಭೂಮಿಗೆ ಎಷ್ಟು ಬೆಲೆ ಬಂತು, ಎಷ್ಟು ಅಭಿವೃದ್ಧಿ ಆಯಿತು ಎಂಬುದು ಈ ಭಾಗದ ಜನತೆಗೆ ತಿಳಿದಿದೆ ಎಂದರು.

ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಮಾತನಾಡಿ, ಗ್ರಾಮಾಂತರ ಜಿಲ್ಲೆಗೆ ಮೆಟ್ರೋ ರೈಲು ಸಂಪರ್ಕ, ಕಾವೇರಿ ನೀರು ಹಾಗೂ ಬಯಪ್ಪ ಪ್ರಾಧಿಕಾರಕ್ಕೆ ಅನುದಾನವನ್ನು ಕಲ್ಪಿಸುವಂತೆ ಉಪಮುಖ್ಯಮಂತ್ರಿಗಳಲ್ಲಿ ಮನವಿಯನ್ನು ಸಲ್ಲಿಸಿದರು.

ಈ ಕುರಿತು ಮಾತನಾಡಿದ ಸಚಿವರು ಉಪಮುಖ್ಯಮಂತ್ರಿಗಳು ಕೂಡ ಗ್ರಾ.ಪಂ, ಬೂತ್ ಮಟ್ಟದಲ್ಲಿ ಹೊಸ ಹುರುಪನ್ನು ನೀಡಿದ್ದಾರೆ. ದೇವನಹಳ್ಳಿಯೂ ಅಭಿವೃದ್ದಿ ಹೊಂದುತ್ತಿದ್ದು, ಕೈಗಾರಿಕೋದ್ಯಮ ಹೆಚ್ಚಾಗುತ್ತಿದೆ. ಇದರಿಂದ ದೇವನಹಳ್ಳಿಗೆ ಮೆಟ್ರೋ ಸಂಪರ್ಕ ಅಗತ್ಯವಾಗಿದೆ. ದೇವನಹಳ್ಳಿಗೆ ಮೆಟ್ರೋ ಸಂಪರ್ಕವನ್ನು ಬಜೆಟ್‌ನಲ್ಲಿ ಸೇರಿಸಲಾಗಿದೆ. ಆದ? ಬೇಗ ಇದಕ್ಕೆ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಬಯಪ ಅಧ್ಯಕ್ಷರಾದ ವಿ. ಶಾಂತಕುಮಾರ್, ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೆಗೌಡ, ವಿಧಾನ ಪರಿಷತ್ ಶಾಸಕರಾದ ಎಸ್. ರವಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟನ ಪ್ರಾಧಿಕಾರದ ಅಧ್ಯಕ್ಷರಾದ ಬಿ. ರಾಜಣ್ಣ, ದೇವನಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಜಗನ್ನಾಥ್,ಬಯಪ ಆಯುಕ್ತರು ರಾಜೇಂದ್ರ ಪಿ. ಚೋಳನ್ ಬಯಪ ನೀರ್ದೇಶಕರಾದ ವಿಜಯಪುರ ಮಂಜುನಾಥ್, ಪ್ರಸನ್ನಕುಮಾರ್, ರಾಮಚಂದ್ರಪ್ಪ, ಸೇರಿದಂತೆ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ನಾಮ ನಿರ್ದೇಶಿತ ಸದಸ್ಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಬಾಕ್ಸ್......

ಹೊತ್ತಿ ಉರಿದ ಕಾರು

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡುತ್ತಿದ್ದ ವೇದಿಕೆ ಸಮೀಪವೇ ಕಾರು ಧಗ ಧಗನೇ ಹೊತ್ತಿ ಉರಿದ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.