ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ಜನರಿಗೆ ಕುಡಿಯುವ ನೀರು ಬಿಡುಗಡೆ ನೆಪಹೇಳಿ ತಮಿಳುನಾಡಿಗೆ ಶನಿವಾರದಿಂದ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತ ಮುಖಂಡರು, ಕಾವೇರಿ ಹೋರಾಟಗಾರರು ಕಪ್ಪುಪಟ್ಟಿ ಕಟ್ಟಿಕೊಂಡು ಹಾಗೂ ಕಪ್ಪು ಬಾವುಟ ಪ್ರದರ್ಶಿಸಿ ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದರು.ನಗರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಸಮಾವೇಶ ದಿನವೇ ಸರ್‌ಎಂವಿ ಪ್ರತಿಮೆ ಬಳಿಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕಾವೇರಿ ಹೋರಾಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಪ್ಪು ಬಾವುಟ ಪ್ರದರ್ಶಿಸಿದರು.
ನಂತರ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿ, ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.ನಂತರ ರಸ್ತೆಗಿಳಿದ ರೈತರು, ಹೋರಾಟಗಾರರು ಕುರ್ಚಿಗಳನ್ನು ರಸ್ತೆಯಲ್ಲಿ ಹಾಕಿ ಕುಳಿತರು. ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೂ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಂಡು ಮನವಿ ಮಾಡಿದರು.
ಆದರೂ ಹೆದ್ದಾರಿಯಲ್ಲಿ ಕುಳಿತ ಪ್ರತಿಭಟನೆ ನಡೆಸುತ್ತಿದ್ದ ಜಿಲ್ಲಾ ರೈತಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಮುಖಂಡರಾದ ಕೆ.ಟಿ.ಶ್ರೀಕಂಠೇಗೌಡ, ಅಂಬುಜಮ್ಮ, ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ಮಹಾಂತಪ್ಪ ಅವರನ್ನು ಪೊಲೀಸರು ಬಂಧಿಸಿದರು.ತಮಿಳುನಾಡಿಗೆ ನೀರು ಬಿಟ್ಟು ಸರ್ಕಾರ ರೈತರನ್ನು ವಂಚಿಸುತ್ತಿದೆ. ಇದನ್ನು ಪ್ರಶ್ನೆ ಮಾಡಿದ ಪ್ರತಿಭಟನಾಕಾರರನ್ನು ಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗಾಗಿ ಗ್ಯಾರಂಟಿ ಸಮಾವೇಶ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೆರೆ ರಾಜ್ಯಕ್ಕೆ ನೀರು ಹರಿಸಿ ಜಿಲ್ಲೆ ಜನತೆಗೆ ಮೋಸ ಮಾಡಿದ್ದಾರೆ. ರಾಜ್ಯದಿಂದ ತಮಿಳುನಾಡಿಗೆ ನಿರಂತರ ನೀರು ಹರಿಸಿದ ಪರಿಣಾಮ ಕೆಆರ್‌ಎಸ್ ಸೇರಿದಂತೆ ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗಿವೆ. ನೀರಿಲ್ಲದೆ ರೈತರು ಹೊಸ ಬೆಳೆ ಹಾಕಿಲ್ಲ. ಜಮೀನಿನಲ್ಲಿರುವ ಬೆಳೆಗೆ ನೀರು ನೀಡಿಲ್ಲ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಆರೋಪಿಸಿದರು.ಜನಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುವಂತೆ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿದರೂ ನೀರು ಬಿಡದ ಸರ್ಕಾರ ಇದೀಗ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಅಣೆಕಟ್ಟೆ ಭರ್ತಿ ಮಾಡಿಕೊಳ್ಳಲು ನದಿಗೆ ನೀರು ಬಿಡಲಾಗಿದೆ ಎಂದು ಸಬೂಬು ಹೇಳುತ್ತಿರುವ ಸರ್ಕಾರ ರೈತರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.