ತಮಿಳುನಾಡಿಗೆ ಕಾವೇರಿ ನೀರು: ಖಾಲಿಕೊಡ, ವಿಷದ ಬಾಟಲಿ ಹಿಡಿದು ಪ್ರತಿಭಟನೆ

| Published : Mar 11 2024, 01:21 AM IST

ತಮಿಳುನಾಡಿಗೆ ಕಾವೇರಿ ನೀರು: ಖಾಲಿಕೊಡ, ವಿಷದ ಬಾಟಲಿ ಹಿಡಿದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ತಕ್ಷಣವೇ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಜನ- ಜಾನುವಾರುಗಳ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸಬೇಕು. ಕುಡಿಯಲು ಸಹ ನೀರಿಲ್ಲದ ಇಂತಹ ಬರಗಾಲದ ವೇಳೆ ಕಾಂಗ್ರೆಸ್ ಸರ್ಕಾರ ರಾಜಾರೋಷವಾಗಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ಜನತೆಗೆ ವಿಷವುಣಿಸಲು ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಹೆದ್ದಾರಿಯಲ್ಲಿ ಖಾಲಿಕೊಡ, ವಿಷದ ಬಾಟಲಿ ಹಿಡಿದು ಭಾನುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಕುವೆಂಪು ವೃತ್ತದ ಬಳಿ ವೇದಿಕೆ ಸಂಸ್ಥಾಪಕ‌ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನತೆಗೆ ಕುಡಿಯಲು ಸಹ ನೀರಿಲ್ಲದ ಇಂತಹ ಬರಗಾಲದ ವೇಳೆ ಕಾಂಗ್ರೆಸ್ ಸರ್ಕಾರ ರಾಜಾರೋಷವಾಗಿ ತಮಿಳುನಾಡಿಗೆ ನೀರು ಹರಿಸುವ ಮೂಲಕ ಜನತೆಗೆ ವಿಷವುಣಿಸಲು ಮುಂದಾಗಿದೆ ಎಂದು ಅಣಕು ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದರು.

ತಕ್ಷಣವೇ ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರನ್ನು ನಿಲ್ಲಿಸಬೇಕು. ಜನ - ಜಾನುವಾರುಗಳ ರಕ್ಷಣೆಗಾಗಿ ನಾಲೆಗಳಿಗೆ ನೀರು ಹರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನೀರು ಬಿಡುಗಡೆ ಬಗ್ಗೆ ಸ್ಪಷ್ಟ ಮಾಹಿತಿ ಕೊಡಲಿ: ಡಾ.ಇಂದ್ರೇಶ್‌

ಮಂಡ್ಯ:

ಬೆಂಗಳೂರು ನೆಪ ಹೇಳಿ ಕಾಂಗ್ರೆಸ್‌ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ತಮಿಳುನಾಡು ಓಲೈಕೆಗೆ ಕೈ ಸರ್ಕಾರ ಮುಂದಾಗಿದ್ದು, ಕೂಡಲೇ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್‌.ಇಂದ್ರೇಶ್‌ ಒತ್ತಾಯಿಸಿದರು.

ನೀರಿಲ್ಲದ ಸಮಯದಲ್ಲೂ ಕೆಆರ್‌ಎಸ್‌ನಿಂದ ನದಿಗೆ ಹೆಚ್ಚು ನೀರು ಹರಿಸಿರುವುದರ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಟ್ರಯಲ್ ಬ್ಲಾಸ್ಟ್ ವಿಚಾರದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ನಡೆದ ಅನುಮಾನಸ್ಪದವಾಗಿತ್ತು. ಜಾರ್ಖಂಡ್ ತಜ್ಞರನ್ನ ಕರೆಸಿ ಟ್ರಯಲ್ ಬ್ಲಾಸ್ಟ್ ಗೆ‌ ಮುಂದಾಗಿತ್ತು. ಅದರ ಮುಂದುವರೆದ ಭಾಗವಾಗಿ ರಾತ್ರೋ ರಾತ್ರೀ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಯಬಿಟ್ಟಿದೆ ಎಂದು ಆರೋಪಿಸಿದರು.

ಈ ಸರ್ಕಾರಕ್ಕೆ ಜಿಲ್ಲೆಯ ರೈತರ, ಜಾನುವಾರುಗಳ ಶಾಪ ತಟ್ಟದೇ ಬಿಡೋಲ್ಲ. ಈ ಸರ್ಕಾರಕ್ಕೆ ಬ್ಯಾಲೆನ್ಸ್ ಇಲ್ಲ. 136 ಸೀಟು ಗೆದ್ದ ಮದದಲ್ಲಿ ಈ ಹೇಳಿಕೆ ನೀಡುತ್ತಿದ್ದಾರೆ. ಜಿಲ್ಲೆಯ ಜನರು ಅವರಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ನಾಳೆ (ಸೋಮವಾರ) ಮಧ್ಯಾಹ್ನದ ವೇಳೆ ಸರಿಯಾದ ಮಾಹಿತಿ ನೀಡಿ. ಬೆಂಗಳೂರಿಗೆ ಎಷ್ಟು ನೀರು ಬಿಟ್ಟಿದ್ದೀರಾ ತಿಳಿಸಿ. ಇಲ್ಲದಿದ್ದರೇ ಬಿಜೆಪಿ ರಾಜ್ಯಾಧ್ಯಕ್ಷರ‌ ಜೊತೆ ಚರ್ಚೆ ಮಾಡಿ ಹೋರಾಟ ಮಾಡ್ತೇವೆ. ಹೋರಾಟದ ರೂಪುರೇಷೆಗಳನ್ನು ನಾಳೆ ನಿರ್ಧರಿಸುತ್ತೇವೆ ಎಂದರು.