ಸಿಬಿಐ, ಇಡಿ ಸೋಗಿನಲ್ಲಿವಂಚನೆ: 20 ಜನ ವಶಕ್ಕೆ

| Published : Oct 14 2025, 01:00 AM IST

ಸಾರಾಂಶ

ಸಿಬಿಐ, ಇಡಿ ಅಧಿಕಾರಿಗಳ ಹೆಸರಿನಲ್ಲಿ ಜನರಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಸೈಬರ್‌ ವಂಚಕ ಜಾಲದ ನಕಲಿ ಬಿಪಿಓ ಕಂಪನಿಯೊಂದನ್ನು ಎಚ್‌ಎಸ್‌ಆರ್‌ ಲೇಔಟ್ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, 20 ಜನರವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಬಿಐ, ಇಡಿ ಅಧಿಕಾರಿಗಳ ಹೆಸರಿನಲ್ಲಿ ಜನರಿಗೆ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಸೈಬರ್‌ ವಂಚಕ ಜಾಲದ ನಕಲಿ ಬಿಪಿಓ ಕಂಪನಿಯೊಂದನ್ನು ಎಚ್‌ಎಸ್‌ಆರ್‌ ಲೇಔಟ್ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದು, 20 ಜನರವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ಸೈಬಿಟ್ಸ್ ಸಲೂಷನ್‌ ಕಂಪನಿ ಮೇಲೆ ಆರೋಪ ಬಂದಿದ್ದು, ಮೂರು ದಿನಗಳ ಹಿಂದೆ ಆ ಕಂಪನಿ ಮೇಲೆ ಪೊಲೀಸರ ದಾಳಿ ನಡೆದಿದೆ. ಈ ಸಂಬಂಧ ಕಂಪನಿಯ 20ಕ್ಕೂ ಹೆಚ್ಚಿನ ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಂಪನಿಯು ಚೀನಾ ಹಾಗೂ ಪಾಕಿಸ್ತಾನ ಸೈಬರ್‌ ವಂಚಕರ ಜತೆ ನಂಟು ಹೊಂದಿರುವ ಶಂಕೆ ಇದೆ ಎಂದು ಹೇಳಲಾಗಿದೆ.

ಪ್ರಕರಣದ ವಿವರ:

ಎಚ್‌ಎಸ್‌ಆರ್‌ ಲೇಔಟ್‌ ಸಮೀಪ ಸೈಬಿಟ್ಸ್‌ ಸಲೂಷನ್‌ ಪ್ರೈ.ಲಿಮಿಟೆಡ್‌ (Cybits Solution Pvt) ಹೆಸರಿನಲ್ಲಿ ನಕಲಿ ಬಿಪಿಓ ಕಂಪನಿಯನ್ನು ಆರೋಪಿಗಳು ತೆರೆದಿದ್ದರು. ಈ ಕಂಪನಿಗೆ ಆನ್‌ಲೈನ್‌ ಉದ್ಯೋಗದ ನೆಪದಲ್ಲಿ ಸುಮಾರು 20 ರಿಂದ 25 ಯುವಕ ಹಾಗೂ ಯುವತಿಯರನ್ನು ಸೇರಿಸಿಕೊಂಡಿದ್ದರು. ಅವರಿಗೆ ಆನ್‌ಲೈನ್‌ನಲ್ಲಿ ವಂಚನೆ ಮಾಡುವ ತರಬೇತಿ ನೀಡಿದ್ದರು. ಉದ್ಯೋಗಿಗಳು ಅಪರಿಚಿತ ವ್ಯಕ್ತಿಗಳನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿ ಇಡಿ, ಸಿಬಿಐ ಹಾಗೂ ಪೊಲೀಸ್ ಹೀಗೆ ತನಿಖಾ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಡ್ರಗ್ಸ್ ಹಾಗೂ ಅಕ್ರಮ ಹಣ ವರ್ಗಾವಣೆ ಕೃತ್ಯ ಎಸಗಿರುವುದಾಗಿ ಬೆದರಿಸುತ್ತಿದ್ದರು. ಆಗ ಸಂತ್ರಸ್ತರಿಗೆ ಸಹಾಯ ಮಾಡುವ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತಿದ್ದರು. ಅಕ್ಕಪಕ್ಕದ ಸ್ಥಳಿಯರನ್ನು ವಿಚಾರಿಸಲಾಗಿ ಆ ಕಂಪನಿಯಲ್ಲಿ ಕಂಪ್ಯೂಟರ್ ಉಪಕರಣಗಳ ಮೂಲಕವಾಗಿ ಆಕ್ರಮ ಸೈಬರ್ ವಂಚನೆ ಮಾಡುತ್ತಿರುವುದು ಗೊತ್ತಾಯಿತು. ಈ ಮಾಹಿತಿ ಮೇರೆಗೆ ಆ ಕಂಪನಿ ಮೇಲೆ ದಾಳಿ ನಡೆಸಿ ಕೆಲಸ ಮಾಡುತ್ತಿದ್ದ 20 ಜನರವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.