ಸಾರಾಂಶ
ವಕ್ಫ್ ಬೋರ್ಡ್‌ನಲ್ಲಿ 54 ಸಾವಿರ ಎಕರೆ ಭೂಮಿ ನೋಂದಣಿಯಾಗಿದ್ದು, ಸುಮಾರು 29,000 ಎಕರೆ ನೋಂದಾಯಿತ ಭೂಮಿಯನ್ನು ಕಬಳಿಸಲಾಗಿದೆ ಎಂದು ಮಾಣಿಪ್ಪಾಡಿ ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮವಾಗಿ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಅನ್ವರ್ ಮಾಣಿಪ್ಪಾಡಿ ಸಮಿತಿ ವರದಿಯಂತೆ ವಕ್ಫ್ ಆಸ್ತಿ ಕಬಳಿಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್‌ನಲ್ಲಿ 54 ಸಾವಿರ ಎಕರೆ ಭೂಮಿ ನೋಂದಣಿಯಾಗಿದ್ದು, ಸುಮಾರು 29,000 ಎಕರೆ ನೋಂದಾಯಿತ ಭೂಮಿಯನ್ನು ಕಬಳಿಸಲಾಗಿದೆ ಎಂದು ಮಾಣಿಪ್ಪಾಡಿ ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮವಾಗಿ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಹೇಳಿದರು.
ಮಂಗಳೂರು ತಾಲೂಕಿನಲ್ಲಿ ಕಳೆದ 24 ವರ್ಷಗಳಲ್ಲಿ 37 ಆಸ್ತಿಗಳು ವಕ್ಫ್ ಪಾಲಾಗಿದ್ದು, ಆ ಪೈಕಿ ಶೇ.50ರಷ್ಟು ಆಸ್ತಿಗಳು ಸರ್ಕಾರಿ ಭೂಮಿ ಮತ್ತು ವಕ್ಫ್ ಬೈ ಯೂಸರ್ ಎಂಬ ಆಧಾರದಲ್ಲಿ ಹಸ್ತಾಂತರವಾಗಿವೆ. ಸರ್ಕಾರಿ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಬದಲಿಸುವುದು ಹಾಗೂ ಅದನ್ನು ವಕ್ಫ್‌ಗೆ ಕೊಟ್ಟ ಮೇಲೆ 1995ರ ತಿದ್ದುಪಡಿ ಕಾಯ್ದೆ ಪ್ರಕಾರ ಪ್ರಶ್ನಿಸುವ ಅಧಿಕಾರವಿರುವುದು ಟ್ರ್ಯಬುನಲ್‌ಗೆ ಮಾತ್ರ. ವಕ್ಫ್ ಟ್ರ್ಯಬುನಲ್ ಆದೇಶ ಪ್ರಶ್ನಿಸುವ ಅಧಿಕಾರ ಹೈಕೋರ್ಟ್- ಸುಪ್ರೀಂ ಕೋರ್ಟ್‌ಗೂ ಇಲ್ಲ. ಹೀಗಿರುವಾಗ, ವಕ್ಫ್ ಕಾಯ್ದೆಯು ನಮ್ಮ ಸಂವಿಧಾನ ವಿರೋಧಿ ಕಾಯ್ದೆಯಾಗಿದೆ ಎಂದು ಚೌಟ ಹೇಳಿದರು.ಇಂದು ಪ್ರತಿಭಟನೆ: ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ವಕ್ಫ್ ಬೋರ್ಡ್ ಅತಿಕ್ರಮಣ ಆರೋಪದಡಿ ರೈತರಿಗೆ ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ನ.4ರಂದು ಎಲ್ಲ ಜಿಲ್ಲೆ, ತಾಲೂಕುಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಮಂಗಳೂರಿನಲ್ಲೂ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.