ಸಿಸಿ ರಸ್ತೆ ಕಾಮಗಾರಿ ಕಳಪೆ, ಗ್ರಾಮಸ್ಥರ ಆಕ್ರೋಶ

| Published : Jan 18 2025, 12:46 AM IST

ಸಾರಾಂಶ

ಕಳೆದ 4-5 ದಿನಗಳಲ್ಲಿ ಸುಮಾರು 180 ಮೀಟರ್ ಸಿಸಿ ರಸ್ತೆ ನಿರ್ಮಾಣ ಮಾಡಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ

ಲಕ್ಷ್ಮೇಶ್ವರ: ಸಮೀಪದ ಗೊಜನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು. ಗುತ್ತಿಗೆದಾರರು ತಮ್ಮ ಮನಸ್ಸಿಗೆ ಬಂದಂತೆ ಸಿಸಿ ರಸ್ತೆ ಮಾಡಿ ಕೈತೊಳೆದುಕೊಂಡು ಯಾರಿಗೂ ಕ್ಯಾರೇ ಎನ್ನುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಸಮೀಪದ ಗೊಜನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಮಾರು 2 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಕಳೆದ ವಾರ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರು.

ಈ ಕಾಮಗಾರಿಯಲ್ಲಿ ₹53 ಲಕ್ಷ ವೆಚ್ಚದಲ್ಲಿ 230 ಮೀಟರ್ ಸಿಸಿ ರಸ್ತೆ ಕಾಮಗಾರಿ ಮಾಡಬೇಕಾಗಿದೆ. ಕಳೆದ 4-5 ದಿನಗಳಲ್ಲಿ ಸುಮಾರು 180 ಮೀಟರ್ ಸಿಸಿ ರಸ್ತೆ ನಿರ್ಮಾಣ ಮಾಡಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ.ಗುಣಮಟ್ಟದ ಸಿಮೆಂಟ್ ಬಳಸಿಲ್ಲ ಹಾಗೂ ಸಿಸಿ ಹಾಕುವ ಮೊದಲು 6 ಇಂಚು ವೈಟ್ ಮಿಕ್ಸ್ ಸಿಮೆಂಟ್ ಮಿಶ್ರಣ ಮಾಡಿ‌ ಹಾಕಬೇಕು.ಅಲ್ಲದೆ ಖಡೀಕರಣ ಮಾಡಬೇಕು ಅದನ್ನು ಮಾಡುವ ಗೋಜಿಗೆ ಹೋಗಿಲ್ಲ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ದಿನಕ್ಕೆ ಎರಡು ಟ್ಯಾಂಕರ್ ನೀರು ಹಾಕುವ ಮೂಲಕ ಕ್ಯೂರಿಂಗ್ ಕಾರ್ಯ ಮಾಡುತ್ತಿದ್ದಾರೆ. ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವ ಕಾರ್ಯ ಮಾಡುತ್ತಿರುವವರಿಗೆ ಸರಿಯಾದ ಜ್ಞಾನ ಇಲ್ಲ. ಹೀಗಾಗಿ ಬೇಕಾಬಿಟ್ಟಿ ಕಾಮಗಾರಿ ನಡೆಯುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಹೀಗೆ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದರೂ ಕೆಆರ್‌ಡಿಎಲ್‌ ಸಂಸ್ಥೆಯ ಎಂಜಿನೀಯರ್ ಕಾಮಗಾರಿ ಗುಣಮಟ್ಟದ ಬಗ್ಗೆ ಉಸ್ತುವಾರಿ ನೋಡಿಕೊಂಡಿಲ್ಲ, ಹೀಗಾಗಿ ಗುತ್ತಿಗೆದಾರರು ಆಡಿದ್ದೇ ಆಟವಾಗಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇನ್ನೂ ಹಲವು ಕಾಮಗಾರಿಗಳು ಬಾಕಿ ಇವೆ. ಈಗಾಗಲೇ ಹೀಗೆ ಆದರೆ ಮುಂದಿನ ಕಾಮಗಾರಿಗಳು ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಸರ್ಕಾರ ಸುಮಾರು ₹2 ಕೋಟಿ ವೆಚ್ಚದಲ್ಲಿ ನಮ್ಮ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ₹ 53 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡಬೇಕಾಗಿದೆ. ಈಗ ಮಾಡಿರುವ 180 ಮೀಟರ್ ರಸ್ತೆ ಕಾಮಗಾರಿಗೆ ₹20 ಲಕ್ಷ ಕೂಡಾ ಖರ್ಚಾಗಿಲ್ಲ. ಅಲ್ಲದೆ ಕೆಆರ್‌ಡಿಎಲ್ ಇಂಜಿನೀಯರ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರೀಕ್ಷೆ ಮಾಡಿಲ್ಲ. ಹೀಗಾಗಿ ಗುತ್ತಿಗೆದಾರರು ಆಡಿದ್ದೇ ಆಟವಾಗಿದೆ ಎಂದು ಗ್ರಾಪಂ ಉಪಾಧ್ಯಕ್ಷ ಮಹಾಂತಗೌಡ ಪಾಟೀಲ ಹೇಳಿದ್ದಾರೆ.

ಗೊಜನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರೀಕ್ಷೆ ನಡೆಸಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುವ ಕಾರ್ಯ ಮಾಡುತ್ತೇವೆ ಎಂದು ಕೆಆರ್‌ಡಿಎಲ್‌ ಸಂಸ್ಥೆಯ ಇಂಜಿನೀಯರ್‌ ಅನಿಲ್ ತಿಳಿಸಿದ್ದಾರೆ.