ಸಿಸಿಬಿ ಪೊಲೀಸರ ಕಾರ್ಯಾಚರಣೆ ನಾಲ್ವರು ಕಳ್ಳರ ಬಂಧನ

| Published : Aug 27 2024, 01:43 AM IST

ಸಾರಾಂಶ

ಬಂಧಿತರಲ್ಲಿ ಮೂವರು ಜಿಲ್ಲಾ ವ್ಯಾಪ್ತಿಯ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 45 ಲಕ್ಷ ರೂ. ಮೌಲ್ಯದ 551 ಗ್ರಾಂ ಚಿನ್ನಾಭರಣ, 1.4 ಕೆ.ಜಿ ಬೆಳ್ಳಿ ಪದಾರ್ಥಗಳು, 2 ಕಾರು, 3 ದ್ವಿಚಕ್ರವಾಹನ, 1 ಪಿಸ್ತೂಲ್, ಜೀವಂತ ಗುಂಡುಗಳು, 2 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ರಾಡು, ಸ್ಕ್ರ್ಯೂ ಡ್ರೈವರ್, 2 ಹ್ಯಾಂಡ್ ಗ್ಲೌಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿವಿಧೆಡೆ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮೈಸೂರಿನ ಸಿಸಿಬಿ ಘಟಕದ ಪೊಲೀಸರು, 45 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ಗಾಂಜಾ, 2 ಪಿಸ್ತೂಲ್ ವಶ, ಜೀವಂತ ಗುಂಡುಗಳು, 3 ಕಾರು, 3 ದ್ವಿಚಕ್ರವಾಹನಗಳು,. 2 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ನಾಲ್ವರು ಹಳೆಯ ಆರೋಪಿಗಳಾಗಿದ್ದು, ಜೈಲಿನಿಂದ ಬಿಡುಗಡೆಯಾದ ಮೇಲೆ ಕೃತ್ಯ ಮುಂದುವರೆಸಿದ್ದರು. ನಾಲ್ವರ ಪೈಕಿ ಇಬ್ಬರು (ತಂದೆ ಮತ್ತು ಮಗ) ಒಂದೇ ಕುಟುಂಬದ ಸದಸ್ಯರಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕಳೆದ ಜೂ.6 ರಂದು ಶ್ಯಾದನಹಳ್ಳಿ ಗ್ರಾಮದ ಮನೆಯೊಂದರಲ್ಲಿ 11.40 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿತ್ತು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಾಗ ಜು.16 ರಂದು ಎನ್.ಆರ್. ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇತರ ಮೂವರು ಆರೋಪಿಗಳೊಂದಿಗೆ ಸೇರಿ ವಿವಿಧೆಡೆ ಕಳ್ಳತನ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಆಧರಿಸಿ ಆ.21 ರಂದು ಉಳಿದ ಮೂವರು ಆರೋಪಿಗಳನ್ನು ಕೆಆರ್ ಎಸ್ ರಸ್ತೆಯ ಕೆಐಡಿಬಿ ಕಚೇರಿ ಬಳಿ ಬಂಧಿಸಲಾಗಿದೆ ಎಂದರು.ಬಂಧಿತರಲ್ಲಿ ಮೂವರು ಜಿಲ್ಲಾ ವ್ಯಾಪ್ತಿಯ 11 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಂಧಿತರಿಂದ 45 ಲಕ್ಷ ರೂ. ಮೌಲ್ಯದ 551 ಗ್ರಾಂ ಚಿನ್ನಾಭರಣ, 1.4 ಕೆ.ಜಿ ಬೆಳ್ಳಿ ಪದಾರ್ಥಗಳು, 2 ಕಾರು, 3 ದ್ವಿಚಕ್ರವಾಹನ, 1 ಪಿಸ್ತೂಲ್, ಜೀವಂತ ಗುಂಡುಗಳು, 2 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ರಾಡು, ಸ್ಕ್ರ್ಯೂ ಡ್ರೈವರ್, 2 ಹ್ಯಾಂಡ್ ಗ್ಲೌಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಿಂದ ನಗರ ವ್ಯಾಪ್ತಿಯ 5, ಜಿಲ್ಲೆಯ 1, ಮಂಡ್ಯದ 7 ಕಳವು ಹಾಗೂ ಮೈಸೂರು ಜಿಲ್ಲೆಯ 1, ಮಂಡ್ಯ ಜಿಲ್ಲೆಯ 2 ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದರು.4 ಕೆಜಿ ಗಾಂಜಾ ವಶಮತ್ತೊಬ್ಬ ಆರೋಪಿ ವಶದಲ್ಲಿ 4 ಕೆ.ಜಿ. 66 ಗ್ರಾಂ. ಗಾಂಜಾ, 1 ಪಿಸ್ತೂಲ್ ಹಾಗೂ 1 ಕಾರು ದೊರೆತಿದೆ. ಈತನ ವಿರುದ್ಧ ವಿವಿಧೆಡೆ 18 ಸ್ವತ್ತು ಕಳವು ಪ್ರಕರಣಗಳಿಗೆ. ಆರೋಪಿಗಳಲ್ಲಿ ಒಬ್ಬನ ಮೇಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 3 ಕಳವು ಪ್ರಕರಣ, ಮತ್ತೊಬ್ಬನ ಮೇಲೆ 36, ಇನ್ನೊಬ್ಬನ ಮೇಲೆ 17 ಸ್ವತ್ತು ಕಳವು ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.ಡಿಸಿಪಿಗಳಾದ ಎಂ. ಮುತ್ತುರಾಜ್, ಎಸ್. ಜಾಹ್ನವಿ, ಸಿಸಿಬಿ ಎಸಿಪಿ ಎಸ್.ಎನ್. ಸಂದೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಎಂ. ಮೋಹನ್ ಕುಮಾರ್, ಎಸ್ಐ ಮಾರುತಿ ಅಂತರಗಟ್ಟಿ, ಎಎಸ್ಐಗಳಾದ ಅಜ್ಗರ್ ಖಾನ್, ಎಂ.ಆರ್. ಗಣೇಶ್, ರಾಮೇಗೌಡ, ಸಿಬ್ಬಂದಿ ಪ್ರಕಾಶ್, ರಾಮಸ್ವಾಮಿ, ಜಯರಾಮ್, ಉಮಾಮಹೇಶ್, ಮಹೇಶ್, ರಮೇಶ್, ನರಸಿಂಹರಾಜು, ರವಿ, ಗೋವಿಂದ, ಶಿವಣ್ಣ, ಕೆ. ಮಹೇಶ್, ಸಿ.ಎನ್. ರವಿ, ಮಮತಾ, ರಮ್ಯಾ ಈ ಪತ್ತೆ ಮಾಡಿದ್ದಾರೆ.